ರೈತರ ಮಾರಣಹೋಮ: ಯುಪಿ ಸಿಎಂ ಯೋಗಿ, ಅಜಯ್ ಮಿಶ್ರಾ ರಾಜೀನಾಮೆಗೆ ಡಿಕೆ ಶಿವಕುಮಾರ್ ಒತ್ತಾಯ
ಬೆಂಗಳೂರು: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ನಡೆದ ಮಾರಣಹೋಮದ ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿ ರೈತರ ಬೇಷರತ್ ಕ್ಷಮೆ ಯಾಚಿಸಿಸಬೇಕು, ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಲೇ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಕೆಪಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮಂತ್ರಿಯ ಬೆಂಗಾವಲು ವಾಹನವನ್ನು ರೈತರ ಮೇಲೆ ಹರಿಸಿ 8 ಜನ ಅಮಾಯಕ ರೈತರ ಸಾವಿಗೆ ಕಾರಣರಾದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್, ಘಟನೆಗೆ ನೇರ ಕಾರಣವಾಗಿರುವ ಕೇಂದ್ರ ಗೃಹ ಖಾತೆ ಸಹಾಯಕ ಅಜಯ್ ಮಿಶ್ರಾ ಕೂಡಲೇ ತಮ್ಮ ಸಚಿವ ರಾಜೀನಾಮೆ ಕೊಡಬೇಕು. ಬಳಿಕ ರೈತ ಸಮುದಾಯದ ಬೇಷರತ್ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದರು.
ದೇಶದಲ್ಲಿ ಅನ್ನದಾತನಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರ ರೈತರ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದೆ.. ದೇಶ ಯಾವಕಡೆ ಹೋಗುತ್ತಿದೆ, ಏನಾಗುತ್ತಿದೆ ಎಂಬ ಚಿಂತೆ ಕಾಡುತ್ತಿದೆ. ಯುಪಿಯಲ್ಲಿ ನಡೆದಿರುವ ಘಟನೆ ಮನಕಲಕುವಂತಹದ್ದು ಇದು ಸಮುದಾಯದ ಕೊಲೆ, ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋಗಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಯುವ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ಎಳೆದಾಡುವುದು ಭಾರತೀಯ ಮಹಿಳೆಗೆ ಮಾಡಿರುವ ದೊಡ್ಡ ಅವಮಾನವಾಗಿದೆ. ಸಾಂತ್ವನ ಹೇಳುವುದು ಭಾರತೀಯ ಸಂಸ್ಕೃತಿ. ದಬ್ಬಾಳಿಕೆ ಮಾಡುವುದು, ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ಟೀಕಿಸಿದರು.
ದೇಶವನ್ನು ರಾಮರಾಜ್ಯ ಮಾಡುವುದಾಗಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ, ರೈತರ ಮೇಲೆ, ಕಾರ್ಮಿಕರು, ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ ನಡೆಸುವ ಮೂಲಕ ದೇಶದಲ್ಲಿ ರಾವಣ ಸಂಸ್ಕತಿ ಮೆರಸುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಘಟನೆ ವಿರುದ್ದ ದೇಶದಲ್ಲಿ ರೈತ ಸಮುದಾಯ ಆಕ್ರೋಶಗೊಂಡು ಬೀದಿಗೆ ಬಂದಿದೆ. ಸಾಂತ್ವನ ಹೇಳಲು ಹೋಗಿದ್ದ ಪ್ರಿಯಾಂಕ ಗಾಂಧಿ ಅವರಿಗೆ ಅವಮಾನ ಮಾಡಿ ಬಂಧನ ಮಾಡಿರುವುದು ಖಂಡನೀಯ ಕೂಡಲೇ ಪ್ರಿಯಾಂಕ ಗಾಂಧಿ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.