ಬೆಳಗಾವಿ: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರ ಇಂದು ಬಿಡುಗಡೆಯಾಗಿದೆ. ತಮ್ಮೆ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾದ ಹಿನ್ನೆಲೆ ಪಟಾಕಿ ಹಚ್ಚಿ ಸಂಭ್ರಮಿಸುವ ವೇಳೆ ಅಭಿಯಾನಿಯ ಕಣ್ಣಿಗೆ ಗಾಯವಾಗಿರುವ ಘಟನೆ ಬೆಳಗಾವಿಯಲ್ಲಿ ಕಂಡು ಬಂದಿದೆ.
ರಾಜ್ಯಾಧ್ಯಂತ ಇಂದು ಅಭಿನವ ಚಕ್ರವರ್ತಿ ಸುದೀಪ್ ನಟಿಸಿರುವ ಕೋಟಿಗೊಬ್ಬ-3 ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕಳೆದ ಎರಡು ವರ್ಷಗಳಿಂದ ಸುದೀಪ್ ಚಿತ್ರ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಇನ್ನು ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಹಿನ್ನೆಲೆ ಬೆಳಗಾವಿಯ ನಿರ್ಮಲ್ ಚಿತ್ರಮಂದಿರದಲ್ಲಿ ಜಮಾಯಿಸಿದ ಕಿಚ್ಚ ಅಭಿಮಾನಿಗಳು ಸುದೀಪ್ ಕಟ್ಔಟ್ಗೆ ಹಾಲಿನ ಅಭಿಷೇಕ ಮಾಡಿದರು. ಬಳಿಕ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದರು. ಇದೇ ವೇಳೆ ಪಟಾಕಿಯ ಬೆಂಕಿ ಕಿಡಿಯೊಂದು ಅಭಿಮಾನಿಯೊರ್ವನ ಕಣ್ಣಿಗೆ ಸಿಡಿದ ಪರಿಣಾಮ ರಕ್ತ ಸುರಿದ ಗಾಯವಾಗಿದೆ.
ಇನ್ನು ಕೋಟಿಗೊಬ್ಬ 3 ಚಿತ್ರ ಬಿಡುಗಡೆಗೆ ವಿಳಂಬ ಮಾಡಿದ ಹಿನ್ನೆಲೆ ಸುದೀಪ್ ಅಭಿಮಾನಿಗಳು ನಿರ್ಮಲ್ ಚಿತ್ರಮಂದಿರದ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಯ್ತು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಖಡೇ ಬಜಾರ್ ಪೊಲೀಸರು ಕಿಚ್ಚನ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.