Latest

ಚರ್ಚ್ ಗಳಲ್ಲಿ ಬಲವಂತದ ಮತಾಂತರ ಕಡಿವಾಣಕ್ಕೆ ಮುಂದಾದ ಸರ್ಕಾರ : ಚರ್ಚ್ ಗಳ ಸಮೀಕ್ಷೆಗೆ ಸೂಚನೆ

ಬೆಂಗಳೂರು: ಚರ್ಚ್ ಗಳಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂಬ ದೂರುಗಳು ರಾಜ್ಯದ ಕೆಲವೆಡೆ ಕೇಳಿ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಚರ್ಚ್ ಗಳ ಸಮೀಕ್ಷೆ ನಡೆಸುವುದರೊಂದಿಗೆ ಅನಧಿಕೃತ ಚರ್ಚ್ ಗಳನ್ನು ಪತ್ತೆಮಾಡಿ ವರದಿ ನೀಡುವಂತೆ ವಿಧಾನಮಂಡಲ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವ್ಯವಹಾರ, ಗೃಹ, ಕಂದಾಯ ಹಾಗೂ ಕಾನೂನು ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಂಡು ಶಾಸಕ ಗೂಳಿಹಟ್ಟಿ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆ ಸಹಿತ ರಾಜ್ಯದ ಅನೇಕ ಕಡೆ ಬಲವಂತದ ಮತಾಂತರ ನಡೆಯುತ್ತಿದೆ. ಈ ಬಗ್ಗೆ ಕ್ರಮ ಜರುಗಿಸುವ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1790 ಚರ್ಚ್ ಗಳಿದ್ದು ಇವುಗಳ ಪೈಕಿ ಅನಧಿಕೃತ ಚರ್ಚ್ ಗಳೆಷ್ಟು ಎಂಬುದನ್ನು ಪತ್ತೆಮಾಡಿ ವರದಿ ನೀಡಲು ಸಮಿತಿಯಿಂದ ಸೂಚಿಸಲಾಗಿದೆ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಅಥವಾ ಅಲ್ಪಸಂಖ್ಯಾತರ ಆಯೋಗದಲ್ಲಿ ನೋಂದಣಿಯಾಗದೆ, ಸೂಕ್ತ ಅನುಮತಿ ಪಡೆಯದೆ ಇರುವ ಚರ್ಚ್, ಬೈಬಲ್ ಸೊಸೈಟಿಗಳನ್ನು ʼಅನಧಿಕೃತʼ ಎಂದು ಪರಿಗಣಿಸಲಾಗುವುದು. ಈಗಾಗಲೇ ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 36 ಬಲವಂತದ ಮತಾಂತರ ಪ್ರಕರಣಗಳು ದಾಖಲಾಗಿವೆ. ಕೆಲ ವಸತಿ ಗೃಹಗಳನ್ನು ಬೈಬಲ್ ಸೊಸೈಟಿಯಾಗಿ ಬದಲಾಯಿಸಿರುವ ಆರೋಪಗಳಿವೆ. ಹೀಗೆ ಅನಧಿಕೃತವಾಗಿ ತಲೆಯೆತ್ತಿರುವ, ಚರ್ಚ್ ಗಳು ಹಾಗೂ ಅಲ್ಲಿರುವ ಪಾದ್ರಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿ: ಸಿಎಂ ಬೊಮ್ಮಾಯಿ

ಹೆಚ್ಚುತ್ತಿರುವ ಮತಾಂತರಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ. ಅದಕ್ಕಾಗಿ ಅನೇಕ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಗಳ ಬಗ್ಗೆ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಕರ್ನಾಟಕದಲ್ಲಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹೇಳಿದ್ದರು

ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುತ್ತಿರುವ ಸರ್ಕಾರ: ಚರ್ಚ್ ಗಳ ಅಸಮಾಧಾನ:

ಅಧಿಕೃತ-ಅನಧಿಕೃತ ಎಂದು ಚರ್ಚ್ ಗಳ ಸಮೀಕ್ಷೆ ನಡೆಸಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನೀಡಿರುವ ಸೂಚನೆಗೆ ಚರ್ಚ್ ಗಳಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರಿನ ಆರ್ಚ್ ಬಿಶಪ್ ಡಾ ಪೀಟರ್ ಮಚಾದೋ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾವು ಪ್ರಬುದ್ಧ ಹಾಗೂ ವಿಶಾಲ ಮನೋಭಾವದ ವ್ಯಕ್ತಿಯೆಂದು ಪರಿಗಣಿಸಿದ್ದೆವು. ಆದರೆ ಅವರು ಮೂಲಭೂತವಾದಿ ಗುಂಪುಗಳ ಒತ್ತಡಕ್ಕೆ ಮಣಿದು ಮತಾಂತರದ ವಿಷಯದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುತ್ತಿರುವುದು ನಮ್ಮ ಬೇಸರಕ್ಕೆ ಕಾರಣವಾಗಿದೆ.

ಕ್ರೈಸ್ತರು ಸೇವಾ ಮನೋಭಾವ ಹೊಂದಿದ್ದು ಎಲ್ಲಡೆ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ನಡೆಸುತ್ತ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅವುಗಳನ್ನು ಸರ್ಕಾರ ಎಣಿಕೆ ಮಾಡಲಿ. ಕೆಲವರು ಆರೋಪಿಸಿದಂತೆ , ಕ್ರಿಶ್ಚಿಯನ್ ಧರ್ಮಕ್ಕೆ ಎಲ್ಲೆಡೆ ಮತಾಂತರಗೊಳ್ಳುತ್ತಿದ್ದರೆ, ಇತರರಿಗೆ ಹೋಲಿಸಿದರೆ ಕ್ರೈಸ್ತ ಜನಸಂಖ್ಯೆಯ ಶೇಕಡಾವಾರು ಏಕೆ ನಿಯಮಿತವಾಗಿ ಕಡಿಮೆಯೇ ಇದೆ ಎಂದು ಪ್ರಶ್ನಿಸಿದ್ದಾರೆ.

ನಾವು ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಬಯಸುತ್ತೇವೆ. ಚರ್ಚ್ ಗಳು ಬಲವಂತದ, ಮೋಸದ ಮತ್ತು ಪ್ರೋತ್ಸಾಹಿತ ಮತಾಂತರಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ʼಕ್ರೈಸ್ತರ ಮೇಲೆ ಬೇಹುಗಾರಿಕೆʼ

ಕ್ರೈಸ್ತರ ಮೇಲೆ ಬೇಹುಗಾರಿಕೆ ನಡೆಸಲು ಸರ್ಕಾರ ಹೊರಟಂತಿದೆ. ರಾಜಕೀಯ ದುರುದ್ದೇಶದಿಂದ ಮತಾಂತರದ ಆರೋಪ ಮಾಡಲಾಗುತ್ತಿದೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣವೆಂದರೆ, ಆ ವರ್ಗಗಳ ಜನರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು. ಆದರೆ ಈ ರೀತಿ ಪೊಲೀಸ್ ಕೃತ್ಯಗಳನ್ನು ನಡೆಸುತ್ತಿರುವುದೇಕೆ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಪ್ರಶ್ನಿಸಿದ್ದಾರೆ

Related Articles

Leave a Reply

Your email address will not be published.

Back to top button