ಚರ್ಚ್ ಗಳ ಸಮೀಕ್ಷೆ ಪ್ರಶ್ನಿಸಿ ಅರ್ಜಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್
ಬೆಂಗಳೂರು: ರಾಜ್ಯದಲ್ಲಿ ಚರ್ಚ್ ಗಳ ಸಮೀಕ್ಷೆ ನಡೆಸಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸೂಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ ನೀಡಿದೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿ 21 ದಿನಗಳೊಳಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿದೆ.
ಪಿಯುಸಿಎಲ್ ಅರ್ಜಿಯಲ್ಲಿ, ಈ ಆದೇಶವು ತಾರತಮ್ಯ ಮತ್ತು ಭಾರತೀಯ ಸಂವಿಧಾನದ ಉಲ್ಲಂಘನೆ ಎಂದು ಹೇಳಿದೆ. ಚರ್ಚ್ ಗಳ ಸಮೀಕ್ಷೆಗೆ ಯಾವುದೇ ಕಾರಣಗಳನ್ನು ಅಥವಾ ಉದ್ದೇಶವನ್ನು ಸರ್ಕಾರ ನೀಡಿಲ್ಲ ಎಂದು ದೂರಲಾಗಿದೆ.
ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಅರ್ಜಿದಾರರ ಪರ ವಾದಿಸಿ, ರಾಜ್ಯದಲ್ಲಿನ ಚರ್ಚ್ ಗಳ ಸಮೀಕ್ಷೆಯಿಂದ ಖಾಸಗಿತನದ ಹಕ್ಕು ಉಲ್ಲಂಘನೆಯಾಗಲಿದೆ ಎಂದಾಗ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಅಂಕಿ ಅಂಶಗಳನ್ನು ಸಂಗ್ರಹಿಸಲು ಸರ್ವೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಇದರಿಂದ ಅಲ್ಪಸಂಖ್ಯಾತರ ಯಾವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಪ್ರಶ್ನಿಸಿತು.
ಶಾಸಕರೋರ್ವರು ಮನವಿ ಮಾಡಿರುವುದಕ್ಕೆ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಮತಾಂತರದ ಕಾರಣ ನೀಡಿ ಚರ್ಚ್ ಗಳ ಸರ್ವೆ ನಡೆಸಲಾಗುತ್ತಿದೆ. ಇದರಿಂದ ಖಾಸಗಿ ಹಕ್ಕು ಉಲ್ಲಂಘನೆಯಾಗಲಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ವಾದ ಆಲಿಸಿದ ಬಳಿಕ ನ್ಯಾಯಪೀಠ, ಚರ್ಚ್ ಗಳ ಸರ್ವೆ ಆದೇಶಕ್ಕೆ ಸದ್ಯಕ್ಕೆ ತಡೆ ಇಲ್ಲ ಎಂದು ಅಭಿಪ್ರಾಯಪಟ್ಟು, ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು 3 ವಾರಗಳ ಕಾಲವಕಾಶ ನೀಡಿದೆ.