Latest

G K Govinda Rao: ಕನ್ನಡದ ಹಿರಿಯ ನಟ, ಚಿಂತಕ, ಪ್ರೊ. ಜಿ ಕೆ ಗೋವಿಂದರಾವ್ ನಿಧನ

ಬೆಂಗಳೂರು: ಕನ್ನಡದ ಹಿರಿಯ ನಟ, ಚಿಂತಕ, ಪ್ರೊ. ಜಿ ಕೆ ಗೋವಿಂದರಾವ್ ಅವರು ಹುಬ್ಬಳ್ಳಿಯಲ್ಲಿರುವ ಪುತ್ರಿಯ ಮನೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ. 86 ವರ್ಷದವರಾಗಿದ್ದ ಪ್ರೊ. ಜಿ.ಕೆ. ಗೋವಿಂದ ರಾವ್​ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 4.45ರ ಸುಮಾರಿಗೆ ಸಾವನ್ನಪ್ಪಿದ್ದಾರೆ.

ನಟ, ಚಿಂತಕರಾಗಿ, ರಂಗಭೂಮಿ ಕಲಾವಿದರಾಗಿ ಖ್ಯಾತರಾಗಿದ್ದ ಜಿ.ಕೆ. ಗೋವಿಂದ ರಾವ್ ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 8.30ಕ್ಕೆ ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ನೆರವೇರಲಿದೆ ಎನ್ನಲಾಗಿದೆ. ಜಿ.ಕೆ. ಗೋವಿಂದ ರಾವ್​ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ರಂಗಭೂಮಿ, ಸಿನಿಮಾರಂಗದಲ್ಲಿ ಗುರುತಿಸಿಕೊಂಡು ಕನ್ನಡದ ಹಿರಿಯ ನಟರಾಗಿ, ವಿಚಾರವಾದಿ ಸಾಹಿತಿಯಾಗಿದ್ದ ಜಿಕೆಜಿ ಅವರು 1937 ಏ.27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಇಂಗ್ಲೀಷ್ ಸಾಹಿತ್ಯಾಧ್ಯಯನ ಮಾಡಿ, ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡು ಜನಪರವಾದ ನಿಲುವು ಹೊಂದಿದ್ದರು. ಅದ್ಭುತವಾಗಿ ಅಭಿನಯಿಸುತ್ತಿದ್ದರು. ಹೊಸ ಅಲೆ ಸಿನಿಮಾಗಳಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅನೇಕ ಶಿಷ್ಯಂದಿರನ್ನು ಪ್ರೋತ್ಸಾಹಿಸಿ ಅಭಿನಯ ವೃತ್ತಿಗೆ ಕಳುಹಿಸಿದವರು.

ವಿಮರ್ಶಾ ಲೇಖನಗಳಾದ ಶೇಕ್ಸ್ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್ಪಿಯರ್ ಸಂವಾದ ಹಾಗೂ ನಡೆ-ನುಡಿ, ಈಶ್ವರ-ಅಲ್ಲಾʼ ಎಂಬ ಕಿರುಕಾದಂಬರಿ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ ಸಹಿತ ಅನೇಕ ಕಥೆ, ನಾಟಕಗಳನ್ನು ಬರೆದವರು.

ಜಿ ಕೆ ಗೋವಿಂದ ರಾವ್​​​ ನಿಧನಕ್ಕೆ ಸಿದ್ದರಾಮಯ್ಯ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ಲೇಖಕ, ಚಿಂತಕ,‌ ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.

ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ

Related Articles

Leave a Reply

Your email address will not be published.

Back to top button