ಮೈಸೂರು: ದರ್ಗಾದಲ್ಲಿ ಪ್ರತಿನಿತ್ಯ ಕನ್ನಡ ಭಾಷೆಯಲ್ಲಿ ಪ್ರಾರ್ಥನೆ
ಮೈಸೂರು: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ದರ್ಗಾದಲ್ಲಿ ಮುಸ್ಲಿಂರು ಉರ್ದು ಭಾಷೆ ಬದಲಿಗೆ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮೈಸೂರಿನಲ್ಲಿ ಉರ್ದು ಭಾಷೆ ದೂರ ಮಾಡಿ ಕನ್ನಡ ಭಾಷೆ ಅಂದ್ರೆ ಪ್ರೇಮ ಮೆರೆದ ಪ್ರಥಮ ಕನ್ನಡ ದರ್ಗಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಬಳಲೆ ಗೇಟ್ ಬಳಿ ಇರುವ ದರ್ಗಾದಲ್ಲಿ ಪ್ರತಿನಿತ್ಯ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮಸೀದಿ ದರ್ಗಾಗಳು ಅಂದ್ರೆ ಅಲ್ಲಿ ಬರೀ ಉರ್ದು ಭಾಷೆಗೆ ಮಾತ್ರ ಆಧ್ಯತೆ ನೀಡಲಾಗುತ್ತೆ. ಆದ್ರೆ ಬೆಳಲೆ ಗೇಟ್ ಬಳಿ ಇರುವ ದರ್ಗಾದಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯ ನೀಡಲಾಗಿದೆ.
ಇಲ್ಲಿ ನಡೆಯುವ ಪ್ರಾರ್ಥನೆ, ಶುಭ ಸಂದೇಶಗಳು ಎಲ್ಲವೂ ಕನ್ನಡ ಭಾಷೆಯಲ್ಲೇ ನಡೆಯುತ್ತದೆ. ಸಾಮೂಹಿಕ ಪ್ರಾರ್ಥನೆಯನ್ನೂ ಕನ್ನಡದಲ್ಲೇ ಪ್ರಾರ್ಥಿಸುತ್ತಾರೆ. ನೂರಾರು ವರ್ಷಗಳ ಇತಿಹಾಸವಿರುವ ಹಜರತ್ ಸೈದಾನಿ ಬಿಬಿಮಾ ದರ್ಗಾದಲ್ಲಿ ಪ್ರತಿ ಗುರುವಾರ ಕನ್ನಡದಲ್ಲಿ ಪ್ರಾರ್ಥನೆ ಮಾಡುವ ಮೂಲಕ ಭಾಷಾ ಪ್ರೇಮ ಮೆರೆದಿದ್ದಾರೆ.
ಧರ್ಮಸ್ಥಳ ಮೂಲದ ಅಂಬಟಿ ಉಸ್ತಾದ್ ರವರು ಕನ್ನಡದಲ್ಲಿ ದುವಾ(ಶುಭ ಸಂದೇಶ) ನೀಡುವ ಮೂಲಕ ಕನ್ನಡ ಪ್ರೇಮ ಪ್ರದರ್ಶಿಸಿದ್ದಾರೆ. ಸಾಮರಸ್ಯ ಹಾಗೂ ಭಾವೈಕ್ಯತೆಗೆ ಒತ್ತು ನೀಡಿರುವ ಈ ದರ್ಗಾಗೆ ಎಲ್ಲ ಸಮುದಾಯದ ಭಕ್ತರು ಸಂಕಷ್ಟಗಳ ಪರಿಹಾರಕ್ಕೆ ಬರುತ್ತಾರೆ.
ಉರ್ದು ಭಾಷೆಯಲ್ಲಿ ಪ್ರಾರ್ಥನೆ ಮಾಡಿದರೆ ಕನ್ನಡಿಗರಿಗೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಪ್ರತಿ ಗುರುವಾರ ಒಂದು ದಿನ ಕನ್ನಡದಲ್ಲೇ ಪ್ರಾರ್ಥನೆ ಮಾಡಿ ದುವಾ ಸಲ್ಲಿಸುತ್ತಾರೆ. ಕನ್ನಡ ಭಾಷೆಯಲ್ಲಿ ಹೀಗೆ ಕನ್ನಡದಲ್ಲೇ ಶುಭ ಸಂದೇಶಗಳನ್ನ ನೀಡುವ ಪದ್ದತಿ ರಾಜ್ಯದಲ್ಲೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಹಜರತ್ ಸೈದಾನಿ ಬಿಬಿಮಾ ದುರ್ಗಾ ಪಾತ್ರವಾಗಿದೆ. ಭಾವೈಕ್ಯತೆಗೆ ಹೆಸರಾದ ದರ್ಗಾದಲ್ಲಿನ ಕನ್ನಡ ಪ್ರೇಮಕ್ಕೆ ಭಕ್ತರು ಫಿದಾ ಆಗಿದ್ದಾರೆ