Latest

ಕಲಬುರಗಿ ರೈತರ ಮೇಲೆ ಮೇಘರಾಜನ ವಕ್ರದೃಷ್ಟಿ: ಮಳೆಹಾನಿ ಸಮಿಕ್ಷೆ ಶೀಘ್ರ ಪೂರ್ಣಗೊಳಿಸಲು ಆಗ್ರಹ

ಕಲಬುರಗಿ: ಮಳೆರಾಯನ ವಕ್ರದೃಷ್ಟಿಗೆ ಕಲಬುರಗಿ ರೈತನ ಬದುಕು ಛಿದ್ರ ಛಿದ್ರವಾಗಿದೆ. ರಕ್ಕಸ ಮಳೆಗಾಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಬೆಳೆ, ಮಣ್ಣು ನೀರು ಪಾಲಾಗಿದೆ. ಹಾಳಾದ ಬೆಳೆಗೆ ಪರಿಹಾರ ನೀರಿಕ್ಷೆಯಲ್ಲಿ ಅನ್ನದಾತನಿದ್ರೆ, ಅಧಿಕಾರಿಗಳು ಸರ್ವೆ ಕಾರ್ಯ ವಿಳಂಬ ಮಾಡ್ತಿರೋದು ರೈತನಿಗೆ ಮತ್ತಷ್ಟು ಟೆನ್ಛನ್ ಶುರುವಾಗಿದೆ.

ಕಳೆದ ವರ್ಷ ಭೀಕರ ಭೀಮೆ ಪ್ರವಾಹಕ್ಕೆ ನಲುಗಿದ್ದ ಕಲಬುರಗಿ ಜಿಲ್ಲೆಯ ರೈತರಿಗೆ ಈ ವರ್ಷ ಅತಿವೃಷ್ಟಿ ದುಸ್ವಪ್ನವಾಗಿ ಕಾಡ್ತಿದೆ. ರಕ್ಕಸ ಮಳೆ ಗಾಳಿಗೆ ಅನ್ನದಾತನ ಬದುಕು ಬರ್ಬಾದ್ ಆಗಿದೆ. ವಿಪರೀತ, ನಿರಂತರ ಧಾರಾಕಾರ ಮಳೆಗೆ ರೈತನ ಲಾಭದಾಯಕ ಬೆಳೆ, ಮಣ್ಣು ನೀರು ಪಾಲಾಗಿದೆ. ಕೆಲವೆಡೆ ನೀರಿನ ರಭಸಕ್ಕೆ ಬೆಳೆ ಕೊಚ್ಚಿಕೊಂಡು ಹೋಗಿದ್ರೆ, ಹಲವೆಡೆ ಜಮೀನಿನಲ್ಲಿ ನೀರು ನಿಂತು ತೊಗರಿ, ಎಳ್ಳು ಸೇರಿದಂತೆ ರೈತನಿಗೆ ಲಾಭ ತಂದುಕೊಡುವ ಬೆಳೆಗಳು ಕೊಳೆಯುತ್ತಿವೆ‌. ಭಾರಿ ಮಳೆ- ಗಾಳಿಗೆ ತೋಟಗಾರಿಕೆ ಬೆಳೆಗಳು ನೆಲಕ್ಕೆ ಉರುಳಿ ಹಾಳಾಗಿದೆ.

ಸಮಿಕ್ಷೆ ವಿಳಂಭ ರೈತರ ಆಕ್ರೋಶ:

ಕೈಗೆ ಬಂದ ಬೆಳೆ ಕಳೆದುಕೊಂಡ ರೈತ ಈಗ ಪರಿಹಾರದತ್ತ ಮುಖಮಾಡಿದ್ದಾನೆ. ಆದ್ರೆ ಅಧಿಕಾರಿಗಳು ಬೆಳೆ ಹಾನಿ ಸರ್ವೆ ವಿಳಂಬ ಮಾಡ್ತಿರೋದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಾಳಾಗಿದ್ದು ಹಾಳಾಯ್ತು, ಬೆಳೆ ಹಾನಿ ಸರ್ವೆ ಕಾರ್ಯ ಬೇಗ ಮುಗಿಸಿದ್ರೆ ಜಮೀನು ಕ್ಲೀನ್ ಮಾಡಿಕೊಂಡು ಮತ್ತೊಂದು ಬೆಳೆನಾದರು ಬೆಳೆಯಬಹುದು ಅಂತಾ ರೈತರು ಅಳಲು ತೊಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸರ್ವೆ ವಿಳಂಬ ಮಾಡ್ತಿರೋದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹಾನಿ ವಿವರ:

ಜೂನ್ ತಿಂಗಳಿನಿಂದ ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಿಂಚೋಳಿ, ಚಿತ್ತಾಪುರ, ಅಫಜಲಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ‌. ಮಳೆ ಹೊಡೆತಕ್ಕೆ ಬೆಳೆ ಹಾನಿಯಾಗಿದ್ರೆ, ಮಳೆ ನೀರಿನ ರಭಸಕ್ಕೆ ಬೆಳೆ ಕೂಡ ಕೊಚ್ಚಿಹೋಗಿದೆ. ಜೊತೆಗೆ ಜಿಲ್ಲೆಯ ಹಲವೆಡೆ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗಿ ಅನ್ನದಾತರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಜಿಲ್ಲೆಯಲ್ಲಿ ಶೇ 30 ರಷ್ಟು ಹೆಚ್ಚಿನ ಮಳೆ ಸುರಿದು ಅತಿವೃಷ್ಟಿ ವಾತಾವರಣ ಸೃಷ್ಟಿಯಾಗಿದೆ. ಜುಲೈ ತಿಂಗಳಲ್ಲಿ ಸುರಿದ ಹೆಚ್ಚುವರಿ ಮಳೆಯಿಂದ ತೊಗರಿ-38,639 ಹೆಕ್ಟೇರ್, ಹೆಸರು-2788 ಹೆಕ್ಟೇರ್, ಉದ್ದು-5441 ಹೆಕ್ಟೇರ್, ಸೋಯಾಬಿನ್-2359 ಹೆಕ್ಟೇರ್, ಹತ್ತಿ-394 ಹೆಕ್ಟೇರ್, ಕಬ್ಬು-262ಹೆಕ್ಟೇರ್, ಸೂರ್ಯಕಾಂತಿ-19 ಹೆಕ್ಟೇರ್ ಹೀಗೆ ಸುಮಾರು ಜುಲೈ ಅಂತ್ಯದವರೆಗೆ ಹಾನಿಯಾದ ಸುಮಾರು 50 ಸಾವಿರ ಹೆಕ್ಟರ್ ಭೂಮಿಯ ಹಾನಿಯ ಬಗ್ಗೆ ವರದಿ ಸಲ್ಲಿಕೆ ಆಗಿದೆ. ಆದ್ರೆ ಸೆಪ್ಟೆಂಬರ್ ತಿಂಗಳಲ್ಲಿಯೂ ಶೇ 30 ರಷ್ಟು ಅಧಿಕ ಮಳೆ ಆಗಿದೆ. ಈ ಬಗ್ಗೆ ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸಮಿಕ್ಷೆ ನಡೆಸುತ್ತಿದೆ. ಆದ್ರೆ ಹೊಲಗಳಲ್ಲಿ ಕೆಸರು ಇರೋದ್ರಿಂದ ಸರ್ವೆ ಕಾರ್ಯಕ್ಕೆ ವಿಳಂಬ ಆಗ್ತಿದೆ ಅಂತಾ ಕೃಷಿ ಅಧಿಕಾರಿ ರತೇಂದ್ರ ಸೂಗೂರ ಸ್ಪಷ್ಟನೆ ನೀಡಿದ್ದಾರೆ‌.

ಒಟ್ಟಿನಲ್ಲಿ ಸಾಲ-ಸೂಲ ಮಾಡಿಕೊಂಡು ಬೆಳೆ ಬೆಳೆದಿದ್ದ ರೈತರಿಗೆ ಮೇಘರಾಜ್ ಅತಿವೃಷ್ಟಿ ಸೃಷ್ಟಿಸಿ ಮರ್ಮಾಘಾತ ನೀಡಿದೆ. ಅನ್ನದಾತರು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಬೆಳೆ ಹಾನಿ ಪರಿಹಾರ ನಿರೀಕ್ಷೆಯಲ್ಲಿರುವ ಅನ್ನದಾತರಿಗೆ ಬೆಳೆ ಹಾನಿ ಸರ್ವೆ ಕಾರ್ಯ ವಿಳಂಬ ಮಾಡ್ತಿರೋದು ಮತ್ತಷ್ಟು ಆತಂಕಕ್ಕೆ ದೂಡಿದೆ. ಇನ್ನಾದ್ರು ಅಧಿಕಾರಿಗಳು ಬೆಳೆ ಹಾನಿ ಸರ್ವೆ ವಿಳಂಬ ಮಾಡದೆ ರೈತರಿಗೆ ಅನುಕೂಲ ಮಾಡುವ ಕೆಲಸ ಮಾಡಬೇಕಿದೆ.

Related Articles

Leave a Reply

Your email address will not be published.

Back to top button