Latest

ನವೆಂಬರ್ 8 ರಂದು ಪಕ್ಷದ ‘ ಜನತಾ ಪತ್ರಿಕೆ ‘ ಲೋಕಾರ್ಪಣೆ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ನಾಳೆ (ನವೆಂಬರ್​ 8) ಪಕ್ಷದ ವಿಚಾರಗಳನ್ನು ಜನತೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಮಾಸಿಕ ‘ ಜನತಾ ಪತ್ರಿಕೆ ‘ ಯನ್ನು ಬಿಡುಗಡೆ ಮಾಡಲಾಗುವುದು. ನಾಡಿನ ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರು ಪತ್ರಿಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಂಪಾದಕೀಯ ನೇತೃತ್ವದಲ್ಲಿ ಈ ಪತ್ರಿಕೆ ಮೂಡಿ ಬರುತ್ತಿದ್ದು, ನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲು ಹಾಗೂ ಪಕ್ಷದ ದನಿಯನ್ನು ಜನರಿಗೆ ಮುಟ್ಟಿಸುವ ಗುರಿಯನ್ನು ಹೊಂದಿದೆ. ಕಾರ್ಯಕರ್ತರಿಗೆ ಪಕ್ಷದ ಬಗ್ಗೆ ದಿಕ್ಸೂಚಿಯಾಗಿ ಹಾಗೂ ಮಾರ್ಗದರ್ಶಿಯಾಗಿ ಮುನ್ನಡೆಸುತ್ತದೆ. ಅಲ್ಲದೆ ಪತ್ರಿಕೆ ನಾಡು, ನುಡಿ, ನೆಲ, ಜಲ, ಭಾಷೆ ಇತ್ಯಾದಿ ವಿಷಯಗಳನ್ನು ಒಳಗೊಳ್ಳುವ ಪತ್ರಿಕೆ ಇದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸೋಮವಾರದಿಂದ ಜೆಡಿಎಸ್ 2ನೇ ಹಂತದ ಕಾರ್ಯಗಾರ:

ಪಕ್ಷ ಸಂಘಟನೆಗೆ ಬಿಡದಿ ತೋಟದಲ್ಲಿ ಕಾರ್ಯಗಾರ ನಡೆಸಿದ ನಂತರ ಇದೀಗ ಮತ್ತೆ ಎರಡನೇ ಹಂತದ ಜೆಡಿಎಸ್ ಸಂಘಟನಾ ಕಾರ್ಯಗಾರ ಸೋಮವಾರದಿಂದ ( ನವೆಂಬರ್ 8-15) ರಿಂದ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಎಲ್ಲ ಹಂತಗಳಲ್ಲೂ ಪಕ್ಷವನ್ನು ಸಂಘಟನೆ ಮಾಡಲು ಈ ಕಾರ್ಯಗಾರ ಸಹಕಾರಿ ಆಗಲಿದೆ. ಎಂಟು ದಿನಗಳ‌ ಕಾಲ ಹಾಲಿ,‌ ಮಾಜಿ ಶಾಸಕರು,‌ ಪದಾಧಿಕಾರಿಗಳ ಸಭೆ ಇಲ್ಲಿ ನಡೆಯಲಿದೆ. ನವೆಂಬರ್ 15ರಂದು ಈ ಕಾರ್ಯಗಾರ ಅಂತ್ಯವಾಗಲಿದೆ ಎಂದರು.

ದಿನಕ್ಕೆ ಎರಡು ಜಿಲ್ಲೆಗಳನ್ನು ಒಳಗೊಂಡಂತೆ ಸಭೆಗಳನ್ನು ನಡೆಸಲಾಗುವುದು. ಈ ಸಭೆಯಲ್ಲಿ ಮುಂದಿನ ಚುನಾವಣಾ ಸಿದ್ಧತೆ ಸಂಬಂಧ ಚರ್ಚಿಸಲಿದ್ದೇವೆ. ಮಹತ್ವದ ಈ ಸಭೆಯಲ್ಲಿ ಭಾಗಿಯಾಗುವ ಎಲ್ಲರಿಗೂ ಕಠಿಣ ಮತ್ತು ಸ್ಪಷ್ಟ ಮಾರ್ಗಸೂಚಿ ನೀಡಲಾಗುವುದು. ತದ ನಂತರ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಸೂಚಿಸಲಾಗುವುದು ಎಂದು ಅವರು ತಿಳಿಸಿದರು.

ಲಘುವಾಗಿ ಮಾತನಾಡುವುದನ್ನು ಬಿಡಿ:

ಕೆಲವರು ನಮ್ಮ ಮಿಷನ್ 123 ಬಗ್ಗೆ ಲಘುವಾಗಿ ಮಾತನ್ನಾಡುತ್ತಿದ್ದಾರೆ. ಹಾಗೆ ಮಾತನಾಡುವ ಅಗತ್ಯವಿಲ್ಲ. 2023ರ ನಮ್ಮ ಗುರಿ ಏನಿದೆ ಅದನ್ನು ಮುಟ್ಟುತ್ತೇವೆ. ನಮ್ಮ ದಾರಿ ಮತ್ತು ಗುರಿಯ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಯಾರೂ ಈ ಬಗ್ಗೆ ಉಪದೇಶ ಮಾಡುವ ಅಗತ್ಯ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಪಕ್ಷ ಬಿಟ್ಟುವರಿಂದ ಸಂಘಟನೆಗೆ ಯಾವುದೇ ಶಕ್ತಿ ಬಂದಿಲ್ಲ. ಪಕ್ಷದಿಂದ ಅನುಕೂಲ ಪಡೆದುಕೊಂಡು ಕೆಲವರು ಹೋಗುತ್ತಿದ್ದಾರೆ. ಯಾರು ಯಾವಾಗ ಪಕ್ಷ ಬಿಡುತ್ತಾರೆ ಎನ್ನುವ ಮಾಹಿತಿ ನನಗೆ ಎರಡು ವರ್ಷಗಳ ಹಿಂದೆಯೇ ಇದೆ. ಮಾಧ್ಯಮದವರಾದ ನಿಮಗೆ ಈಗ ಅದು ಹೊಸದು ಅನ್ನಿಸಬಹುದು. ಕೆಲವರು ದೈಹಿಕವಾಗಿ ಇಲ್ಲೇ ಇರಬಹುದು. ಮಾನಸಿಕವಾಗಿ ಬೇರೆ ಕಡೆ ಹೋಗಿದ್ದಾರೆ ಎಂದು ಅವರು ನೇರವಾಗಿಯೇ ಹೇಳಿದರು.

ಬಿಜೆಪಿ, ಜೆಡಿಎಸ್ ನಿಂದ ನಮ್ಮ ಪಕ್ಷಕ್ಕೆ ಬರುತ್ತಾರೆ ಅಂತಾ ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ. ಅದರಿಂದ ನನಗೆ ಯಾವ ಶಾಕ್ ಆಗೋದಿಲ್ಲ. ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Related Articles

Leave a Reply

Your email address will not be published.

Back to top button