IPL 2021: ಡಲ್ಲಾದ ಡಿವಿಲಿಯರ್ಸ್: ಆರ್ಸಿಬಿಗೆ ಸೋಲು
ಅಬು ಧಾಬಿ: ಸಾಮಾನ್ಯವಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿ ಕೊಡುತ್ತಿದ್ದ ಎಬಿ ಡಿವಿಲಿಯರ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಓವರ್ ನ ಕೊನೆಯ ಎರಡು ಎಸೆತಗಳು ಫುಲ್ಟಾಸ್ ಆಗಿ ಸಿಕ್ಕರೂ ಸಿಕ್ಸರ್ ಹೊಡೆಯುವಲ್ಲಿ ವಿಫಲರಾದರು, ಪರಿಣಾಮ ಆರ್ಸಿಬಿಗೆ 4 ರನ್ ಸೋಲು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಳ್ಳಲು ವಿಫಲ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರು ತಂಡ ಹೈದರಾಬಾದ್ ಪಡೆಯನ್ನು 141 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.
ಆದರೆ ಸಾಧಾರಣ ಮೊತ್ತವನ್ನು ಬೆಂಬತ್ತುವಲ್ಲಿ ವಿಫಲವಾದ ವಿರಾಟ್ ಕೊಹ್ಲಿ ಪಡೆ ಕೇವಲ 137 ರನ್ ಗಳಿಸಿ ಸೋಲೊಪ್ಪಿಕೊಂಡಿತು. 31 ರನ್ ಹಾಗೂ ಎರಡು ಕ್ಯಾಚ್ ಕಬಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಪ್ರಯೋಗಗಳನ್ನು ನಡೆಸುತ್ತ ಎಬಿಡಿ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳುಹಿಸಿದ್ದೇ ಈ ಸೋಲಿಗೆ ಪ್ರಮುಖ ಕಾರಣವಾಯಿತು. ದೇವದತ್ತ ಪಡಿಕ್ಕಲ್ (41) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (40) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರೂ ಹೈದರಾಬಾದ್ ಬೌಲರ್ ಗಳು ಅದಕ್ಕೆ ಅವಕಾಶ ಕೊಡಲಿಲ್ಲ. ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಹೈದರಾಬಾದ್ ಕೊನೆಗೂ ಋತುವಿನ ಮೂರನೇ ಜಯ ಗಳಿಸಿತು.