IPL 2021: 9ನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದ ಚೆನ್ನೈ
ದುಬೈ: ರುತುರಾಜ್ ಗಾಯಕ್ವಾಡ್ ಮತ್ತು ರಾಬಿನ್ ಉತ್ತಪ್ಪ ಅವರ ಆಕರ್ಷಕ ಅರ್ಧ ಶತಕ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮಿಂಚಿನ ಫನಿಶ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ 9 ನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ತಲಿಪಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ಡೆಲ್ಲಿಯನ್ನು 172 ರನ್ ಗಳಿಗೆ ನಿಯಂತ್ರಿಸಿತು. ಡೆಲ್ಲಿ ಪರ ಪೃಥ್ವಿ ಶಾ (60) ಮತ್ತು ರಿಶಬ್ ಪಂಥ್ (50*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಸವಾಲಿನ ಮೊತ್ತವನ್ನು ಬೆಂಬತ್ತಿದ ಚೆನ್ನೈ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ರುತುರಾಜ್ (70) ಮತ್ತು ರಾಬಿನ್ ಉತ್ತಪ್ಪ (63) ಅವರು ಎರಡನೇ ವಿಕೆಟ್ ಜತೆಯಾಟದಲ್ಲಿ ಗಳಿಸಿದ 110 ರನ್ ಜಯದ ಹಾದಿಯನ್ನು ಸುಗಮಗೊಳಿಸಿತು. ಆದರೆ ಶ್ರೇಯಸ್ ಅಯ್ಯರ್ ಅವರ ಅದ್ಭುತ ಫೀಲ್ಡಿಂಗ್ ನೆರವಿನಿಂದ ಡೆಲ್ಲಿ ಅಂತಿಮ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಚೆನ್ನೈಗೆ 11 ಎಸೆತಗಳಲ್ಲಿ 23 ರನ್ ಅಗತ್ಯ ಇದ್ದಾಗ ನಾಯಕ ಧೋನಿ ಅಂಗಣಕ್ಕಿಳಿದರು. 9 ಎಸೆತದಲ್ಲಿ 19 ರನ್ ಅಗತ್ಯ ಇದ್ದಾಗ ಧೋನಿ ಮೊದಲ ಎಸೆತವನ್ನು ಎದುರಿಸಿದರು. ರನ್ ಗಳಿಸುವಲ್ಲಿ ವಿಫಲರಾದರು. ತಾನು ಎದುರಿಸಿದ ಎರಡನೇ ಎಸೆತದಲ್ಲಿ ಸಿಕ್ಸರ್ ಗಳಿಸಿದ ಧೋನಿ ನಂತರ ಟಾಮ್ ಕರ್ರನ್ ಅವರ ಐದು ಎಸೆತಗಳಲ್ಲಿ 13 ರನ್ ಸಿಡಿಸಿ ಜಯ ತಂದುಕೊಟ್ಟರು. ರುತುರಾಜ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕೊತಾ ನೈಟ್ ರೈಡರ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಲಿದ್ದು, ಗೆಲ್ಲುವ ಪಂದ್ಯ ಡೆಲ್ಲಿಯೊಂದಿಗೆ ಫೈನಲ್ ಸ್ಥಾನಕ್ಕಾಗಿ ಸೆಣಸಲಿದೆ.