ನನ್ನ ಮೇಲೆ ಸುಮೋಟೋ ತನಿಖೆ ನಡೆಸಲಿ: ಡಿ ಕೆ ಶಿವಕುಮಾರ್ ಸವಾಲು
ಬೆಂಗಳೂರು: ಪಕ್ಷದ ರಾಜ್ಯ ವಕ್ತಾರ ವಿ.ಎಸ್.ಉಗ್ರಪ್ಪ ಹಾಗೂ ಮಾಧ್ಯಮ ಸಂಚಾಲಕ ಎಂ.ಎ.ಸಲೀಂ ಮಾಧ್ಯಮಗಳ ಮುಂದೆ ಖಾಸಗಿಯಾಗಿ ಮಾತನಾಡಿಕೊಂಡಿರುವ ವಿಷಯ ಪಕ್ಷದ ಮುಜುಗರ ತಂದಿರುವುದು ನಿಜ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲೀಮ್ ಮತ್ತು ಉಗ್ರಪ್ಪ ಪರಸ್ಪರರ ನಡುವೆ ಪಿಸುಗುಟ್ಟುತ್ತಾ ಮಾತನಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ಶಿಸ್ತುಪಾಲನಾ ಸಮಿತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಪಕ್ಷದ ಈ ಇಬ್ಬರು ಮುಖಂಡರ ನಡುವಿನ ಖಾಸಗಿ ಮಾತುಕತೆಗೆ ಸಂಬಂಧಿಸಿದಂತೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದಕ್ಕೂ ತಮಗೆ ಸಂಬಂಧ ಇಲ್ಲ. ನಾನು ಯಾವುದೇ ಕಮೀಷನ್ ವಿಚಾರದಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದರು.
ಈ ಹಿಂದೆ ಯಡಿಯೂರಪ್ಪ-ಅನಂತ್ ಕುಮಾರ್ ಮಾತನಾಡಿಕೊಳ್ಳುತ್ತಿದ್ದ ವಿಡಿಯೊ, ಬಿಜೆಪಿಯ ಸಚಿವರೊಬ್ಬರು ಬೆಡ್ರೂಮ್ಲ್ಲಿ ಹೇಳಿಕೆ ನೀಡಿದ್ದ ವಿಡಿಯೊಗಳು ಹೊರಬಂದಿದ್ದವು. ಅವುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಈ ಆಂತರಿಕ ಮಾತುಕತೆ ಬಗ್ಗೆ ದೂರು ದಾಖಲಿಸಿದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದು ಶಿವಕುಮಾರ್ ಸವಾಲು ಹಾಕಿದರು.