Latest

2ನೇ ಡೋಸ್ ಲಸಿಕೆ ಪಡೆಯುವ 53 ಲಕ್ಷ ಜನರನ್ನು ಪೋನ್ ಕರೆ ಮೂಲಕ ಸಂಪರ್ಕ‌ ಮಾಡಲಾಗುತ್ತಿದೆ: ಸಚಿವ ಸುಧಾಕರ್​

ಧಾರವಾಡ: ಇತ್ತೀಚೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕೊರೋನಾ ನಿರ್ಣಾಮವಾಗಿದೆ ಎಂಬ ಉದಾಸೀನತೆ ಭಾವನೆಯಿಂದ ಜನರು ಲಸಿಕೆ ಪಡೆಯಲು ಮುಂದಾಗುತ್ತಿಲ್ಲ. ಮೊದಲ ಡೋಸ್ ಪಡೆದು ಅವಧಿ ಮುಗಿದವರ ಸಂಖ್ಯೆ 53 ಲಕ್ಷ ಇದ್ದು, ಇವರನ್ನು ಫೋನ್ ಮೂಲಕ ಕರೆಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆದರೂ ಜನರು ಮುಂದೆ ಬರುತ್ತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್​ ಕಳವಳ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಶೇ.17 ರಷ್ಟು ಎರಡು ಲಸಿಕೆ ಪಡೆಯಬೇಕಾದ ಜನರು ಇದ್ದಾರೆ. ಶೇ.62 ರಷ್ಟು ಜನರು ಎರಡನೇ ಡೋಸ್ ಪಡೆಯಬೇಕಿದೆ. ಲಸಿಕೆಯಿಂದ ದೂರ ಉಳಿದವರನ್ನು ಕರೆತರುವ ಕೆಲಸ ಮಾಡುತ್ತಿದ್ದು, ಡಿಸೆಂಬರ್ 31 ರ ಹೊತ್ತಿಗೆ ಶೇ.90 ರಷ್ಟು ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ ಎಂದರು.

ರಾಜ್ಯದಲ್ಲಿ ಸದ್ಯ 60 ಲಕ್ಷ ಲಸಿಕೆ ದಾಸ್ತಾನು ಇದೆ. ರಾಜ್ಯದ ಬೇಡಿಕೆಗೆ ತಕ್ಕಂತೆ ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತಿದೆ. ಕೋವಿಡ್ ನಿಂದ ಸರ್ಕಾರ ಸವಾಲುಗಳನ್ನು ಎದುರಿಸಿದ್ದು ಪಾಠ ಕಲಿತ್ತಿದೆ. ಇದರ ಪರಿಣಾಮವಾಗಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲು ಸಾಧ್ಯವಾಯಿತು. ಲಸಿಕೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕಾರಣ ಮಾಡಿದವು. ಇದು ಮೋದಿ ಲಸಿಕೆ ಎಂದು ಕೂಡಾ ವ್ಯಂಗ್ಯವಾಡಿದರು. ಆದರೆ ಕೋರೋನಾ ನಿಯಂತ್ರಣಕ್ಕೆ ಲಸಿಕೆವೊಂದೆ ಮದ್ದು ಎಂದು ಅರಿತ ಪ್ರತಿಪಕ್ಷಗಳು ಮಾರ್ಚ್ ನಲ್ಲಿ ಕ್ಯೂ ನಿಂತರು ಎಂದು ವ್ಯಗ್ಯವಾಡಿದರು.

ಸಿದ್ದರಾಮಯ್ಯ ತನಿಖೆ ಏಕೆ ಮಾಡಲಿಲ್ಲ?

ಕೋಲಾರ್ ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಾ.ಕೆ ಸುಧಾರಕ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅವರು ತನಿಖೆ ನಡೆಸುವಂತೆ ಈ ಹಿಂದೆಯೇ ದೂರು ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರು ಇದನ್ನು ಯಾಕೆ ತನಿಖೆ ಮಾಡಲಿಲ್ಲ. ಈ ಮೂಲಕ ಹಗರಣ ಮಾಡಿದವರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಡಿಸಿಸಿ ಬ್ಯಾಂಕ್ ಹಗರಣ ವಿಚಾರದಲ್ಲಿ ಪ್ರತಿಪಕ್ಷ ಮಾಡುವ ಕೆಲಸವನ್ನು ಒಬ್ಬ ಸಚಿವನಾಗಿ ಮಾಡುತ್ತಿದ್ದೇನೆ. ಅದನ್ನು ಅಧಿಕಾರದ ಮದದಿಂದ ಮಾತನಾಡಿದ್ದೇನೆ ಎಂದರೆ ಏನೂ ಹೇಳುವುದು. ಇದನ್ನು ಜನರಿಗೆ ಬಿಡುತ್ತೇನೆ ಎಂದರು.

ಲಸಿಕೆ ವಿಚಾರದಲ್ಲಿ ಜನರ ದಾರಿ ತಪ್ಪಿಸಿದ್ದೆ ಕಾಂಗ್ರೆಸ್:

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಾಕವಾಗಿ ಹರಡುತ್ತಿದ್ದಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕಿತ್ತು. ಆದರೆ ಕಾಂಗ್ರೆಸ್ ಪ್ರತಿ ಹಂತದಲ್ಲೂ ರಾಜಕೀಯ ಮಾಡುತ್ತಲೇ ಬಂದಿತು. ಪ್ರತಿಯೊಂದು ಸಂದರ್ಭದಲ್ಲಿಯೂ ಅಸಹಕಾರ ವ್ಯಕ್ತ ಪಡಿಸುತ್ತಲೇ ಬಂದಿತು. ಈ ಎಲ್ಲಾ ಘಟನೆಗಳನ್ನು ಗಮನಿಸಿರುವ ಜನರಿಗೆ ಎಲ್ಲವೂ ಅರ್ಥವಾಗಿದೆ ಎಂದರು.

Related Articles

Leave a Reply

Your email address will not be published.

Back to top button