Latest

ಕೋವಿಡ್ ನಿಯಂತ್ರಣದಲ್ಲಿದ್ದರೂ ಅಂತ್ಯವಾಗಿಲ್ಲ – ಜಾಗರೂಕವಾಗಿರೋದು ಅತಿಮುಖ್ಯ – ಮಾಂಡವೀಯ ಎಚ್ಚರಿಕೆ

ಬೆಂಗಳೂರು: ದೇಶದಲ್ಲಿ ಕೋವಿಡ್ 19 ಸಾಂಕ್ರಾಮಿಕ ನಿಯಂತ್ರಣದಲ್ಲಿದ್ದರೂ ಇನ್ನೂ ಅಂತ್ಯವಾಗಿಲ್ಲ. ಆದ್ದರಿಂದ ಸರ್ಕಾರಗಳು ಜಾಗರೂಕರಾಗಿರುವುದು ಅತಿ ಮುಖ್ಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ ಎಚ್ಚರಿಸಿದ್ದಾರೆ.

ಎಸ್.ಡಿ.ಎಸ್.- ಟಿ.ಆರ್.ಸಿ ಮತ್ತು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರದ ಮತ್ತು ಸಿ.ಎಸ್.ಆರ್. ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಕೋವಿಡ್ ಫೀಲ್ಡ್ ಉದ್ಘಾಟಿಸಿ, ಮಾತನಾಡಿದ ಅವರು, ಅಗತ್ಯವಿದ್ದೆಡೆ ಸುಲಭವಾಗಿ ಸ್ಥಳಾಂತರಿಸಬಹುದಾದ ಫೀಲ್ಡ್ ಆಸ್ಪತ್ರೆಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುತ್ತಿರುವುದು ಒಂದು ದೂರದೃಷ್ಟಿಯ ನಡೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಶೇ. 83 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಸೆಪ್ಟೆಂಬರ್ 17ರಂದು ನಡೆಸಿದ ವಿಶೇಷ ಅಭಿಯಾನದಲ್ಲಿ ದೇಶದಲ್ಲಿ ಒಟ್ಟು 2.5 ಕೋಟಿ ಡೋಸ್ ಲಸಿಕೆ ನೀಡಲಾಯಿತು. ಇದರಲ್ಲಿ ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿ ದಾಖಲೆ ನಿರ್ಮಿಸಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಜನತೆಯನ್ನು ಸಚಿವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿ ಜಿಲ್ಲೆಯಲ್ಲಿ ಫೀಲ್ಡ್ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಸಿದ್ಧವಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿ ನೆರವು ನೀಡುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳು ತಾವು ಬೆಳೆಯಲು ಅನುವು ಮಾಡಿಕೊಟ್ಟ ಸಮಾಜಕ್ಕೆ ಕೊಡುಗೆ ನೀಡಿ, ಉಪಕಾರ ಸ್ಮರಣೆ ಮಾಡುತ್ತಿವೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಸಿ.ಎಸ್.ಆರ್. ಉಪಕ್ರಮಗಳ ಅಧ್ಯಕ್ಷೆಯಾಗಿರುವ ಗೀತಾಂಜಲಿ ಕಿರ್ಲೋಸ್ಕರ್ ಅವರ ಪ್ರಯತ್ನವನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಹಿಂದುಳಿದ ಜಿಲ್ಲೆಗಳಲ್ಲಿ ಮತ್ತು ಅಗತ್ಯವಿರುವ ಜಿಲ್ಲೆಗಳಲ್ಲಿ ಇಂತಹ ಫೀಲ್ಡ್ ಆಸ್ಪತ್ರೆ ಸ್ಥಾಪಿಸಲು ಮುಂದಾಗುವಂತೆ ಸಲಹೆ ನೀಡಿದರು. ಇದಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button