ಬಿಜೆಪಿ ಮುಖಂಡರು ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು: ಹೆಚ್ ಡಿ ದೇವೇಗೌಡ
ಬೆಂಗಳೂರು: ನಾನು ಆರ್ಎಸ್ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು . ಆರ್ ಎಸ್ಎಸ್ ಬಗ್ಗೆ ನನಗೆ ಗಂಧ ಗಾಳಿ ಗೊತ್ತಿಲ್ಲ. ಬಿಜೆಪಿ ಮುಖಂಡರು ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಬೆಂಗಳೂರಿಗೆ ಬಂದಾಗ ವಿಧಾನಸೌಧ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಅವರೊಂದಿಗೆ ಮಾತನಾಡಿದ್ದೆ. ಕಾರ್ಯಕ್ರಮದ ದುರುಪಯೋಗ ಸಲ್ಲದು ಎಂದಿದ್ದೆ. ಆಗ ಕೆಲವರು ನಾವು ತುರ್ತುಪರಿಸ್ಥಿತಿಗೆ ಬೆಂಬಲಿಸುತ್ತೇವೆ ಎಂದು ಬರೆದುಕೊಟ್ಟಿದ್ದರು ಎಂದರು.
ಇನ್ನೂ ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಹೀನಾಯ ಸ್ಥಿತಿಗೆ ತಲುಪಿದೆ ಎನ್ನುವುದೂ ಗೊತ್ತು. ಸಮ್ಮನೆ ನನ್ನನ್ನು ಕೆಣಕಿದರೆ ಸರಿ ಇರುವುದಿಲ್ಲ ಎಂದು ದೇವೇಗೌಡ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಹಾನಗಲ್ ಹಾಗೂ ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ ಎಂದು ಗೌಡರು, ಕಾಂಗ್ರೆಸ್ ನವರು ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನೇ ಕೂರಬೇಕಿತ್ತಾ ? ಕಾಂಗ್ರೆಸ್ಸಿನವರಿಗೆ ಜೆಡಿಎಸ್ ಅಭ್ಯರ್ಥಿಯೇ ಬೇಕಿತ್ತೇ ಎಂದು ಪ್ರಶ್ನಿಸಿದರು.
ಬಸವಕಲ್ಯಾಣದಲ್ಲಿ 50 ಸಾವಿರ ಮುಸ್ಲಿಂ ಮತದಾರರಿದ್ದಾರೆ ಹೀಗಾಗಿ ಅಲ್ಲೂ ನಾವು ನಮ್ಮ ಪಕ್ಷದ ಅಭ್ಯರ್ಥಿ ಹಾಕಿದ್ದವು. ಅದಕ್ಕೂ ಮುನ್ನ ಭಗವಂತ ಖೂಬಾ ಅವರಿಗೆ ಪಕ್ಷದ ಟಿಕೆಟ್ ನೀಡಲು ಸಿದ್ದರಿದ್ದೆವು. ಆದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒಲವು ತೋರಿ ಸೋತರು ಎಂದರು.
ಸಿಂದಗಿಯಲ್ಲಿ ಮನುಗೂಳಿ ಅವರಿಗೆ ರಾಜಕೀಯವಾಗಿ ಅವಕಾಶ ನೀಡಿ ಸಚಿವ ಸ್ಥಾನವನ್ನು ನೀಡಿದೆವು. ಅವರ ಮರಣದ ನಂತರ ಅವರ ಮಗನನ್ನು ಮನೆ ಮಗನಂತೆ ನೋಡಿಕೊಂಡೆವು. ಆದರೆ ಅವರೀಗ ಕಾಂಗ್ರೆಸ್ಸಿಗೆ ಹೋಗಿದ್ದಾರೆ. ಸಿಂದಗಿಗೆ ನೀರು ಕೊಡಿಸುತ್ತೇವೆ ಎಂದು ಹೇಳಿ ಅವರನ್ನು ಕರೆದುಕೊಂಡು ಹೋಗಲಾಗಿದೆ ಎಂದು ದೇವೇಗೌಡ ಹೇಳಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿಯ ತೋಟದಲ್ಲಿ ನಡೆದ ಏಳು ದಿನಗಳ ಕಾರ್ಯಾಗಾರ, ಮಿಷನ್ 123 ಮರದರು ಪಂಚರತ್ನ ಯೋಜನೆ ಕುರಿತು ಹೆಚ್.ಡಿ.ಕೆ ಬೆನ್ನುತಟ್ಟಿದ ಗೌಡರು ಇದೊಂದು ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.