GT DeveGowda: ಮೂರು ಪಕ್ಷಗಳಿಗೂ ತತ್ವ ಸಿದ್ದಾಂತವಿಲ್ಲ: ಜಿಟಿ ದೇವೇಗೌಡ
ಮೈಸೂರು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳಲ್ಲಿ ತತ್ವ ಸಿದ್ದಾಂತ ಉಳಿದಿಲ್ಲ, ಎಲ್ಲರೂ ಒಂದಾಗಿದ್ದಾರೆ. ಇಲ್ಲಿದ್ದವರು ಅಲ್ಲಿಗೆ ಹೋಗಿದ್ದಾರೆ. ಮಾತನಾಡುವಾಗ ಇದನ್ನ ಯೋಚನೆ ಮಾಡಬೇಕು ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಮಾಜಿ ಸಿಎಂಗಳ ವಾಕ್ ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಬಾಯಿಂದ ಏಕವಚನ ಬಂದರೆ ಜನ ಅದನ್ನ ಗಮನಿಸುತ್ತಾರೆ. ಹಿರಿತನ ಹೆಚ್ಚಾಗುತ್ತಿದ್ದಂತೆ ಹೆಚ್ಚಿನ ಗೌರವಕ್ಕೆ ಪಾತ್ರರಾಗಬೇಕು ಎಂದು ಇಬ್ಬರು ಮಾಜಿ ಸಿಎಂಗಳಿಗೆ ಸಲಹೆ ನೀಡಿದರು.
ನೀವು ಹಿರಿಯರಿದ್ದೀರಿ, ನಿಮಗೆ ಅನುಭವಗಳಾಗಿದೆ. ಮುಖ್ಯಮಂತ್ರಿಗಳಾಗಿದ್ದೀರಿ, ಮಂತ್ರಿಗಳಾಗಿದ್ದೀರಿ, ನೀವು ಜನರಿಗೆ ಹೆದರಬೇಕು ಬಾಯಿಂದ ಏಕವಚನ ಬಂದರೆ ಜನ ಅದನ್ನ ಗಮನಿಸುತ್ತಾರೆ ಎಂದರು. ರಾಜಕಾರಣದಲ್ಲಿ ಮಂಥರೆ ಅಂತವರು ಜಾಸ್ತಿ ಜನ ಇದ್ದಾರೆ. ಮನೆಮನೆಗಳಲ್ಲೂ ಮಂಥರೆ ಪಾತ್ರ ಮಾಡುವವರು ಇದ್ದಾರೆ ಎಂದು ಕುಟುಕಿದರು.
ಇದರ ಬಗ್ಗೆ ಯಾರಿಗೂ ಅರಿವಿಲ್ಲ. ಮಂಥರೆಯಂತವರು ಇಲ್ಲದೆ ಇದ್ದಿದ್ದರೆ ಇಷ್ಟೊಂದು ಕೆಟ್ಟ ಟೀಕೆ ಮಾತು ಬರುವುದಿಲ್ಲ ಜನ ಬುದ್ದಿವಂತರಿದ್ದಾರೆ. ಪರಸ್ಪರ ಟೀಕೆ ಮಾಡಿದ್ರೆ ಜನ ಕೈ ಬಿಟ್ಟಿಬಿಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಒಳ್ಳೆಯ ಆಡಳಿತ ಯಾರು ನಡೆಸಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದರು.