ಡಿಕೆಶಿ ಭಯಪಡುವುದು ಯಾವಾಗ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ, ಎಲ್ಲವನ್ನೂ ಇಲ್ಲಿ ಹೇಳಲಾರೆ: ಕುಮಾರಸ್ವಾಮಿ
ರಾಮನಗರ : ನಾನು ಭಯಬೀಳುತ್ತೇನೋ ಇಲ್ಲವೋ ಅನ್ನುವುದಕ್ಕೆ ಕುಮಾರಸ್ವಾಮಿಗೆ ಗೊತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ಕಾಗಿ ತಿರುಗೇಟು ಕೊಟ್ಟಿದ್ದಾರೆ.
ಬಿಡದಿಯಲ್ಲಿ ಇಂದು ಸಂಜೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಬಗ್ಗೆ ನನಗೆ ಶೇ. 200 ರಷ್ಟು ಚೆನ್ನಾಗಿ ಗೊತ್ತಿದೆ. ಅವರು ಯಾವಾಗ ಭಯಭೀತರಾಗುತ್ತಾರೆ, ಯಾವಾಗ ಹೊಂದಾಣಿಕೆ ಮಾಡಿಕೊಳ್ತಾರೆ ಅನ್ನೋದು ಗೊತ್ತಿದೆ. ಇದು ನನಗೂ ಅವರಿಗೆ ಮಾತ್ರ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ನನ್ನ ಬಗ್ಗೆ ಡಿ.ಕೆ ಶಿವಕುಮಾರ್ ಅಷ್ಟಾದರೂ ತಿಳಿದುಕೊಂಡಿದ್ದಾರಲ್ಲ ಎಂದ ಅವರು, ಅವರು ಭಯಪಡುವ ಇನ್ನಷ್ಟು ವಿಷಯಗಳಿವೆ. ಅವೆಲ್ಲವನ್ನೂ ಇಲ್ಲಿ ಹೇಳಲು ಆಗುವುದಿಲ್ಲ. ಈ ಬಗ್ಗೆ ಹೆಚ್ಚು ಬೇಡ ಎಂದು ಹೆಚ್ ಡಿಕೆ ಅವರು ತಿಳಿಸಿದರು.
ಮಮತಾ ಬ್ಯಾನರ್ಜಿ ಅವರಿಗೆ ಅಭಿನಂದನೆ:
ಮಮತಾ ಬ್ಯಾನರ್ಜಿ ಅವರು ಇಂದು ಉಪ ಚುನಾವಣೆಯಲ್ಲಿ ದೊಡ್ಡ ಅನಂತರದ ಜಯ ಸಾಧಿಸಿದ್ದಾರೆ. ಬಿಜೆಪಿಯ ಯಾವ ತಂತ್ರಕ್ಕೂ ಬಗ್ಗದೇ ಅವರು ಸಾಧಿಸಿ ತೋರಿಸಿದ್ದಾರೆ. ನಮ್ಮ ಪಕ್ಷದ ಪರವಾಗಿ ನಾನು ಅಭಿನಂದಿಸುತ್ತೇನೆ. ನಮ್ಮ ಹೋರಾಕ್ಕೆ ಅವರ ಹೋರಾಟ ಸ್ಫೂರ್ತಿ. ಎಲ್ಲರ ಕುತಂತ್ರ ಬದಿಗಿಟ್ಟು ಜನ ಗೆಲ್ಲಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.