Latest

ಕುಮಟಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಪಿ ಕರ್ಕಿ ನಿಧನ

ಕಾರವಾರ : ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಡಾ.ಎಂ.ಪಿ.ಕರ್ಕಿ ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ವೈದ್ಯರಾಗಿ ಹೊನ್ನಾವರದಲ್ಲಿ ವೃತ್ತಿ ಆರಂಭಿಸಿದ್ದ ಕರ್ಕಿಯವರು ಜನಸಂಘ ಕಾಲದಿಂದ ಬಿಜೆಪಿ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿದ ಕೆಲವೇ ಕೆಲವು ನಾಯಕರಲ್ಲಿ ಒಬ್ಬರಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಡಾ.ಎಂ.ಪಿ.ಕರ್ಕಿಯವರು 1983 ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಗೊಂಡಿದ್ದರು. ತದನಂತರ 1994 ರಲ್ಲಿ ಎರಡನೇ ಅವಧಿಗೆ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಒಂದು ಬಾರಿ ಅಂದಿನ ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಶಿಕ್ಷಣ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ಕರ್ಕಿಯವರು ಹೊನ್ನಾವರದ ಎಂ.ಪಿ.ಇ ಸೊಸೈಟಿ (ಎಸ್.ಡಿ.ಎಂ.ಕಾಲೇಜಿನ) ಅಧ್ಯಕ್ಷರಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿ ದ್ದ ಇವರಿಗೆ ಕೆಲವು ತಿಂಗಳ ಹಿಂದೆ ಮಣಿಪಾಲ್ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೃತರು ಪತ್ನಿ,ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಜಿಲ್ಲೆಯ ಅನೇಕರು ಕಂಬನಿ ಮಿಡಿದಿದ್ದಾರೆ.

Related Articles

Leave a Reply

Your email address will not be published.

Back to top button