Latest

Cabinet Subcommittee: ದತ್ತ ಪೀಠ ಕೋರ್ಟ್ ತೀರ್ಪು ಜಾರಿಗೆ ಸಂಪುಟ ಉಪ ಸಮಿತಿ ರಚನೆ: ಸಚಿವ ಮಾಧುಸ್ವಾಮಿ

ಬೆಂಗಳೂರು: ಬಾಬಾಬುಡನ್ ಗಿರಿಯ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಕುರಿತು ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪನ್ನು ಜಾರಿಗೊಳಿಸುವ ಸಂಬಂಧ ಸಾಧಕ-ಬಾಧಕ ಪರಿಶೀಲಿಸಿ ವರದಿ ನೀಡಲು ಸಂಪುಟ ಉಪ ಸಮಿತಿ ರಚಿಸಲು ಮಂಗಳವಾರ ನಡೆದ ಸಂಪುಟ ಸಭೆ ತೀರ್ಮಾನಿಸಿದೆ.

ಸಂಪುಟ ಸಭೆ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ತಾವೂ ಸೇರಿದಂತೆ ಕಂದಾಯ ಸಚಿವ ಆರ್.ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಈ ಸಮಿತಿ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದರು.

ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಘಪರಿವಾರದ ಕೆಲ ಸಂಘಟನೆಗಳು ಒತ್ತಾಯಿಸಿದ್ದವು.
ಇದಲ್ಲದೇ ಮಂಡ್ಯದ ಸರ್ಕಾರಿ ಸ್ವಾಮ್ಯದ ಮೈಶುಕರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಬೇಕೇ ಅಥವಾ ಸರ್ಕಾರವೇ ನಡೆಸಬೇಕೆ ಎಂಬ ಕುರಿತೂ ವರದಿ ನೀಡಲು ಸಂಪುಟ ಉಪ ಸಮಿತಿ ರಚಿಸಲು ಉದ್ದೇಶಿಸಲಾಗಿದೆ. ಈ ಸಮಿತಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಕಂದಾಯ ಸಚಿವ ಆರ್.ಅಶೋಕ್, ಸದಸ್ಯರಾಗಿರುತ್ತಾರೆ ಎಂದರು.

ಪೊಲೀಸ್ ಲಿಪಿಕ ಸೇವೆ ನೇಮಕ ತಿದ್ದುಪಡಿಗೆ ಸಂಪುಟ ಒಪ್ಪಿಗೆ ನೀಡಿದೆ. ಇದರ ಪ್ರಕಾರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ಹಿಡಿದು ಸಬ್ ಇನ್ಸ್ಪೆಕ್ಟರ್ ವರೆಗೆ ಬಡ್ತಿ ಪಡೆಯಲು ಎಂಟು ವರ್ಷ ಕಡ್ಡಾಯ ಸೇವೆ ಅವಧಿಯನ್ನು ನಾಲ್ಕು ವರ್ಷಕ್ಕೆ ಇಳಿಸಲು ಉದ್ದೇಶಿಸಲಾಗಿದೆ. ಈ ಹಿಂದೆ ಐದು ವರ್ಷ ಇತ್ತು. ಅದನ್ನು ಈಗ ನಾಲ್ಕು ವರ್ಷಕ್ಕೆ ಇಳಿಸಲಾಗುವುದು. ಬಡ್ತಿಗೆ ಅರ್ಹ ಅಭ್ಯರ್ಥಿಗಳು ಇಲ್ಲದಾಗ ಈ ರೀತಿಯ ವರ್ಗಾವಣೆಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ವತಿಯಿಂದ ಶಾಲಾ ವಿದ್ಯಾರ್ಥಿನಿಯರಿಗೆ ಶುಚಿ ಕಿಟ್ ಪೂರೈಸಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದೂ ಅವರು ಹೇಳಿದರು.
ಸಂಧ್ಯಾ ಸುರಕ್ಷಾ ಯೋಜನೆಯಡಿ 60 ವರ್ಷ ಮೀರಿದವರಿಗೆ ನೀಡುತ್ತಿರುವ ಮಾಸಿಕ 600 ರೂ. ಮಾಸಾಶನವನ್ನು 800ಕ್ಕೆ, 65 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ 1 ಸಾವಿರ ರೂ. ಮಾಸಾಶನವನ್ನು 1,200 ಕ್ಕೆ ಹೆಚ್ಚಿಸುವ ಸರ್ಕಾರಿ ಆದೇಶ ಹೊರಡಿಸಲು ಸಂಪುಟ ಅನುಮತಿ ನೀಡಿದೆ. 36 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದ್ದು, ಸರ್ಕಾರಕ್ಕೆ ₹207 ಕೋಟಿ ಹೊರೆಯಾಗಲಿದೆ ಎಂದರು.

ಸಂಪುಟ ಸಭೆಯ ಇತರೆ ಪ್ರಮುಖಾಂಶಗಳು:

•ಉತ್ತರ ಕನ್ನಡ ಜಿಲ್ಲೆ ಕರಾವಳಿ ಪ್ರದೇಶದಲ್ಲಿ ನದಿಗಳು ಸಮುದ್ರ ಸೇರುವ ಜಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾರ್ಲಾಂಡ್ ಯೋಜನೆಗೆ ಒಪ್ಪಿಗೆ. ಸಮುದ್ರದ ನೀರು ನದಿಗೆ ನುಗ್ಗಿ ಉಪ್ಪಾಗುವುದನ್ನು ತಡೆದು, ಸಿಹಿ ನೀರನ್ನು ಕೃಷಿ, ಸಿಗಡಿ ಸಾಕಾಣಿಕೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 300 ಕೋಟಿ ರೂ. ನೀಡಲು ಸಂಪುಟ ಸಭೆ ಸಮ್ಮಿತಿ ನೀಡಿದೆ. ಯೋಜನೆ ಯಶಸ್ವಿಯಾದರೆ, 1,500 ಕೋಟಿ ರೂ. ವೆಚ್ಚದಲ್ಲಿ ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲು ತೀರ್ಮಾನ.
•ಉಡುಪಿ -ಖಾನಾಪುರ ಹೆದ್ದಾರಿಯಲ್ಲಿ 5 ಕಿ.ಮೀ ದ್ವಿಪಥ ನಿರ್ಮಿಸಲು 15 ರೂ. ಕೋಟಿ ಅನುದಾನಕ್ಕೆ ಒಪ್ಪಿಗೆ.
•ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 32 ಎಕರೆ ಪ್ರದೇಶವನ್ನು ಪವನ ವಿದ್ಯುತ್ ಘಟಕ ಸ್ಥಾಪಿಸಲು ರೋಹನ್ ಸೋಲಾರ್ ಕಂಪನಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅನುಮೋದನೆ.
•ಉಡುಪಿ ಜಿಲ್ಲೆಯ ಹೆಬ್ರಿಯನ್ನು ಹೋಬಳಿ ಕೇಂದ್ರವಾಗಿ ಸ್ಥಾಪಿಸಲು ಒಪ್ಪಿಗೆ.
•ಹಿಪ್ಪರಗಿ ಬ್ಯಾರೇಜ್ ರಕ್ಷಣೆಗೆ ತಡೆಗೋಡೆ ನಿರ್ಮಿಸಲು ₹28.2 ಕೋಟಿ ಅನುದಾನಕ್ಕೆ ಒಪ್ಪಿಗೆ.
•ಪೊಲೀಸ್ ಆಧುನೀಕರಣ ಯೋಜನೆ ಅಡಿ ಡಿಜಿಟಲ್ ಯುಎಚ್ಎಫ್ಗೆ ಅನುದಾನ ನೀಡಲು ಸಮ್ಮತಿ.

Related Articles

Leave a Reply

Your email address will not be published.

Back to top button