Latest

Sagarmala Project: ಸಾಗರಮಾಲಾ ಯೋಜನೆಗೆ ಮುಂದುವರಿದ ಮೀನುಗಾರರ ವಿರೋಧ

ಕಾರವಾರ : ವಾಣಿಜ್ಯ ಬಂದರು ವಿಸ್ತರಣೆಯ ಸಾಗರಮಾಲಾ ಯೋಜನೆಗೆ ಸ್ಥಳೀಯ ಮೀನುಗಾರರಿಂದ ಸಾಕಷ್ಟು ವಿರೋಧಕ್ಕೆ ಗುರಿಯಾಗಿತ್ತು. ಪರಿಸರಕ್ಕೆ ಮಾರಕವಾಗಿರುವ ಯೋಜನೆಯನ್ನ ಕೈಬಿಡುವಂತೆ ಮೀನುಗಾರರು ರಸ್ತೆಗಿಳಿದು ತೀವ್ರ ಹೋರಾಟ ನಡೆಸಿದ್ದರು. ಪರಿಣಾಮ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಪರಿಸರ ಇಲಾಖೆ ಸ್ಥಳೀಯವಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಲು ಮುಂದಾಗಿದೆ. ಈ ವೇಳೆ ಮೀನುಗಾರರು ಯೋಜನೆಯನ್ನ ವಿರೋಧಿಸಿ ತಮ್ಮ ಅಹವಾಲುಗಳನ್ನ ಸಲ್ಲಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ.

ರಾಜ್ಯದ ಸರ್ವಋತು ಬಂದರು ಅಂತಲೇ ಪ್ರಸಿದ್ಧಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರನ್ನ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯಡಿಯಲ್ಲಿ ಬಂದರು ವಿಸ್ತರಣೆಗೆ ಯೋಜನೆ ಸಿದ್ಧವಾಗಿದ್ದು, ಇದರ ಅಂಗವಾಗಿ ನಗರದ ಟ್ಯಾಗೋರ್ ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಗುತ್ತಿಗೆ ಪಡೆದ ಕಂಪನಿ ಮುಂದಾಗಿತ್ತು. ಆದ್ರೆ ಈ ವೇಳೆ ಸ್ಥಳೀಯ ಮೀನುಗಾರರು ಕಡಲ ತೀರದ ಪರಿಸರಕ್ಕೆ ಹಾನಿಯಾಗುವಂತೆ ಯೋಜನೆ ನಿರ್ಮಿಸಿದ್ದನ್ನ ವಿರೋಧಿಸಿ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಬಂದರು ಅಭಿವೃದ್ಧಿ ಕಾಮಗಾರಿಗೆ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು,ಪ್ರಕರಣ ಕೋರ್ಟ್ ಮೆಟ್ಟಿಲೇರಿ ಕಾಮಗಾರಿ ಸ್ಥಗಿತಗೊಂಡಿದೆ.

ಈ ನಿಟ್ಟಿನಲ್ಲಿ ಬಂದರು ವಿಸ್ತರಣೆ ಕಾಮಗಾರಿ ಪರಿಸರಕ್ಕೆ ಮಾರಕವಾಗಿ ನಡೆಯುತ್ತಿದೆಯೇ ಎನ್ನುವುದನ್ನ ಸ್ಥಳೀಯವಾಗಿ ಪರಿಶೀಲನೆ ನಡೆಸಲು ರಾಜ್ಯ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾರವಾರಕ್ಕೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಬಳಿಕ ಸ್ಥಳೀಯ ಮೀನುಗಾರರೊಂದಿಗೆ ಕೂಡ ಚರ್ಚಿಸಿದ್ದು, ಅವರ ಅಹವಾಲುಗಳನ್ನ ಸ್ವೀಕರಿಸಿದರು. ಬಂದರು ನಿರ್ಮಾಣದಿಂದಾಗಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಪರಿಸರ ಮಾಲಿನ್ಯ ಹಾಗೂ ಮೀನುಗಾರಿಕೆಗೆ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಬಂದರು ವಿಸ್ತರಣೆ ಪೂರ್ವದಲ್ಲಿ ಪರಿಸರಕ್ಕೆ ಹಾನಿಯಾಗಬಹುದಾದ ಅಂಶಗಳ ಕುರಿತು ಸ್ಥಳೀಯವಾಗಿ ಮಾಹಿತಿಗಳನ್ನ ಕಲೆಹಾಕಿದ್ದು, ಮೀನುಗಾರರ ಸಮಸ್ಯೆಗಳ ಕುರಿತು ಗಮನಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

ಇನ್ನು ಕಾರವಾರದಲ್ಲಿ ಈ ಹಿಂದಿನಿಂದಲೂ ಕದಂಬ ನೌಕಾನೆಲೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಕಡಲ ತೀರಗಳು ಬಳಕೆಯಾಗಿವೆ.ಇದೀಗ ಬಂದರು ವಿಸ್ತರಣೆಗೆ ನಗರದಲ್ಲಿರುವ ಏಕೈಕ ಕಡಲ ತೀರದ ಬಹುಪಾಲು ಬಲಿಯಾಗಲಿದ್ದು,ಮುಂದಿನ ದಿನಗಳಲ್ಲಿ ಕಾಮಗಾರಿಗಳಿಂದಾಗಿ ಕಡಲ ಪರಿಸರಕ್ಕೆ ಸಾಕಷ್ಟು ಹಾನಿ ಸಂಭವಿಸಲಿದೆ. ಇದೀಗ ನಗರ ಪ್ರದೇಶದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಒಂದೇ ಕಡಲ ತೀರವಿದ್ದು, ಬಂದರು ವಿಸ್ತರಣೆ ಬಳಿಕ ಮೀನುಗಾರಿಕೆ ನಡೆಸುವುದು ಅಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಬಂದರು ವಿಸ್ತರಣೆ ಯೋಜನೆ ಅವೈಜ್ಞಾನಿಕವಾಗಿ ರೂಪಿಸಲಾಗಿದ್ದು, ಯಾವುದೇ ಕಾರಣಕ್ಕೂ ಜಾರಿಗೊಳಿಸದಂತೆ ವಿರೋಧಿಸಿ ಮೀನುಗಾರರು ಪ್ರತಿಭಟಿಸಿದ್ದರು. ಇದೀಗ ಪರಿಸರ ಇಲಾಖೆ ಎದುರು ಸಹ ಮೀನುಗಾರರು ಇದೇ ಸಮಸ್ಯೆ ಕುರಿತು ಪ್ರಸ್ತಾಪಿಸಿದ್ದು, ಕಡಲ ತೀರಕ್ಕೆ ಉಂಟಾಗುವ ಹಾನಿಯನ್ನ ತಪ್ಪಿಸುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ ಬಂದರು ವಿಸ್ತರಣೆ ಹೆಸರಿನಲ್ಲಿ ಪರಿಸರಕ್ಕೆ ಉಂಟಾಗುವ ಹಾನಿಯನ್ನ ತಪ್ಪಿಸುವುದರೊಂದಿಗೆ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡಬೇಕು ಅನ್ನೋದು ಮೀನುಗಾರರ ಬೇಡಿಕೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಮಾಹಿತಿ ಪಡೆದುಕೊಂಡ ಪರಿಸರ ಇಲಾಖೆ ಯಾವ ವರದಿ ನೀಡಲಿದೆ ಅನ್ನೋದನ್ನ ಕಾದು ನೋಡಬೇಕು.

Related Articles

Leave a Reply

Your email address will not be published. Required fields are marked *

Back to top button