Latestಅಂಕಣಗಳು

ಸಂಪಾದಕರ ವಿಶ್ಲೇಷಣೆ : ಉಪ ಚುನಾವಣೆ ವೈಯಕ್ತಿಕ ಜಗಳ ಮತ್ತು ಕುಸಿದ ನೈತಿಕತೆ,,,

ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿದೆ,,, ಮೂರು ರಾಜಕೀಯ ಪಕ್ಷಗಳು ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ,, ಎರಡೂ ಕ್ಷೇತ್ರಗಳಲ್ಲಿ ಹೋರಾಟ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅನ್ನಿಸಿದರೂ ಜೆಡಿಎಸ್ ಪಕ್ಷವನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಎಂದಿನಂತೆ ಜೆಡಿಎಸ್ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದರೂ ಫಲಿತಾಂಶವನ್ನು ಬದಲಿಸುವ ಶಕ್ತಿ ಜೆಡಿಎಸ್ ಗೆ ಇದ್ದೇ ಇದೇ,,

ಚುನಾವಣಾ ಪ್ರಚಾರ ಕಣದಲ್ಲಿ ರಾಜ್ಯದ ಘಟಾನುಗಟಿ ನಾಯಕರು ಕಾಣಿಸಿಕೊಂಡಿದ್ದಾರೆ,, ತಮ್ಮ ಮಾತಿನ ವರಸೆಯನ್ನು ಬಳಸಿ ಮತದಾರರನ್ನು ಗೆಲ್ಲುವ ಯತ್ನವೂ ನಡೆಯುತ್ತಿದೆ,, ಅಧಿಕಾರರೂಡ ಬಿಜೆಪಿ ಪಕ್ಷದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಸಂಪುಟದ ಸಹೋದ್ಯೋಗಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ತಾರಾ ಪ್ರಚಾರಕರು. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಮುಖ ಪ್ರಚಾರಕರು. ಹಾಗೆ ಜೆಡಿಎಸ್ ಪಕ್ಷದ ಪರವಾಗಿ ಇಬ್ಬರೇ ಪ್ರಮುಖರು ಅವರು ಹೆಚ್.ಡಿ. ಕುಮಾರಸ್ವಾಮಿ ಮತ್ತು ಎಚ್. ಡಿ. ದೇವೇಗೌಡ.. ಉಳಿದವರು ಲೆಕ್ಕಕ್ಕಿಲ್ಲ…

ಸಾಧಾರಣವಾಗಿ ಎಲ್ಲ ಚುನಾವಣೆಯಲ್ಲೂ ಯಾವುದಾದರೊಂದು ವಿಷಯ ಅಥವಾ ವಿಚಾರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ, ಅದು ಯಾವುದು ಎಂಬುದು ಮೇಲ್ನೋಟಕ್ಕೆ ಗೋಚರವಾಗುವುದಿಲ್ಲ. ಇಂತಹ ವಿಷಯ ಅಥವಾ ವಿಚಾರ ಮತ ಕ್ಷೇತ್ರದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ,, ಅದು ಸಾಮಾನ್ಯ ಮತದಾರನಿಗೆ, ರಾಜಕಾರಣಿಗಳಿಗೆ ಕಾಣುವುದಿಲ್ಲ. ಆದರೆ ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲ ಮತದಾರರೂ ಒಂದೇ ರೀತಿ ಯೋಚಿಸುತ್ತಾರೆ. ಮತ್ತು ಒಂದೇ ರೀತಿ ಮತದಾನ ಮಾಡುತ್ತಾರೆ, ಹೀಗೆ ಪ್ರಮುಖವಾದ ವಿಚಾರವೊಂದು ಎಮರ್ಜ್ ಅದಾಗ ಜಾತಿವಾದ, ಕೋಮುವಾದ, ಹಣ ಹಂಚಿಕೆ ಯಾವುದೂ ಮತದಾರರ ಮೇಲೆ ಪರಿಣಾಮ ಬೀರುವುದಿಲ್ಲ,, ಅದನ್ನೆಲ್ಲ ಮೀರಿ ಮತದಾರ ತನ್ನ ರ್ತೀರ್ಪು ನೀಡುತ್ತಾನೆ.. ಆದರೆ ಕೆಲವೊಮ್ಮೆ ಯಾವುದೇ ವಿಷಯ ವಿಚಾರ ಚುನಾವಣಾ ವಿಚಾರವಾಗಿ ಹೊರಹೊಮ್ಮದಿದ್ದಾಗ ಜಾತಿವಾದ ಕೋಮುವಾದವೇ ಪ್ರಮುಖ ಪಾತ್ರ ಒಹಿಸುತ್ತವೆ,,ಭಾರತದ ಚುನಾವಣಾ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು ಗುರುತಿಸಬಹುದು..

ಇನ್ನು ಸಾರ್ವತಿಕ ಚುನಾವಣೆಗೂ ಉಪಚುನಾವಣೆಗೂ ವ್ಯತ್ಯಾಸವಿದೆ. ಹಾಗೆ ಲೋಕಸಭಾ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗೂ ವ್ಯತ್ಯಾಸವಿದೆ, ಸಾಧಾರವಾಗಿ ಉಪಚುನಾವಣೆಗಳಲ್ಲಿ ಬಹುಮುಖ್ಯವಾದ ವಿಷಯ ವಿಚಾರ ಪ್ರಮುಖ ವಿಷಯವಾಗಿ ಎಮರ್ಜ್ ಆಗುವ ಸಂದರ್ಭ ಕಡಿಮೆ. ಹೀಗಾಗಿ ಸ್ಥಳೀಯ ವಿಚಾರಗಳು ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಕಾಣುತ್ತದೆ. ಜೊತೆಗೆ ಅಧಿಕಾರದಲ್ಲಿ ಇರುವ ಪಕ್ಷ ತನ್ನ ಅಧಿಕಾರವನ್ನು ಬಳಸಿಕೊಂಡು ಜಯಗಳಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.

ಈಗಿನ ಉಪ ಚುನಾವಣೆಯ ವಿಚಾರಕ್ಕೆ ಬರೋಣ.. ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಈ ಚುನಾವಣೆಯನ್ನು ಗೆಲ್ಲಬೇಕಾದ ಅನಿವಾರ್ಯತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗಿದೆ. ಜೆಡಿಎಸ್ ಪಕ್ಷಕ್ಕೆ ಅಂತಹದೇನೂ ಇಲ್ಲ.. ಈ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿದ್ದರಿಂದ ಈ ಫಲಿತಾಂಶ ಬಂತು ಎಂಬುದು ಆ ಪಕ್ಷಕ್ಕೆ ಸಾಕು. ಅದನ್ನ್ ಇಟ್ಟುಕೊಂಡು ಆ ಪಕ್ಷದ ನಾಯಕರು ಆಟ ಆಡಬಲ್ಲರು..

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಾಣುತ್ತಿದೆ. ಇದೇ ಪಕ್ಷ ಗೆಲ್ಲುತ್ತದೆ ಎಂದು ಹೇಳುವ ಸ್ಥಿತಿ ಇಲ್ಲ ಎಂಬುದು ಬಿಜೆಪಿ ಹಿರಿಯ ನಾಯಕರೊಬ್ಬರ ಹೇಳಿಕೆ..ಅವರ ಪ್ರಕಾರ ಈ ಚುನಾವಣೆಯಲ್ಲಿ ಮೋದಿ ಅವರ ವರ್ಚಸ್ಸು ಪ್ರಭಾವ ಬೀರಲಾರದು. ಇದು ಬಿಜೆಪಿ ಮೈನಸ್ ಪೈಂಟ್. ಜೊತೆಗೆ ಏನೇ ಇರಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರೆ ಆಗಿನ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಈ ಮಾತನ್ನು ಕಾಂಗ್ರೆಸ್ ನಾಯಕರು ಒಪ್ಪುತ್ತಾರೆ. ಯಡಿಯೂರಪ್ಪನವರನ್ನು ಬದಲಿಸಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಮಗೆ ಪ್ಲಸ್ ಪಾಯಿಂಟ್ ಎನ್ನುತ್ತಾರೆ ಕಾಂಗ್ರೆಸ್ ನಾಯಕರು.

ಜೊತೆಗೆ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನ ತಮಗೆ ಬೆಂಬಲ ನೀಡಬಹುದು ಎನ್ನುವ ನಂಬಿಕೆಯೂ ಕಾಂಗ್ರೆಸ್ ನಾಯಕರಿಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಚಿಂತನಾ ಲಹರಿಯಲ್ಲಿ ಸಾಮಾನ್ಯ ಅಂಶವೊಂದಿದೆ.. ಅದು ಈ ಚುನಾವಣಾ ಫಲಿತಾಂಶ ಹೀಗೆ ಆಗುತ್ತಿದೆ ಎಂಬ ನಂಬಿಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸೇರಿದಂತೆ ಯಾವ ನಾಯಕರಿಗೂ ಇಲ್ಲ. ಎಲ್ಲ ನಾಯಕರು ಖಾಸಗಿಯಾಗಿ ಮಾತನಾಡುವಾಗ ಕಷ್ಟ ಇದೇ ಎಂಬ ಮಾತನ್ನು ಆಡುತ್ತಾರೆ.

ಇಂತಹ ಸ್ಥಿತಿಯಲ್ಲಿ ಭಯಗ್ರಸ್ಥರಾದ ನಾಯಕರು ಪರಸ್ಪರ ವೈಯಕ್ತಿಕ ನಿಂಧನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ನಡುವಿನ ಜಗಳ ಇವತ್ತಿನ ರಾಜಕೀಯ ಬದುಕು ಎಂತಹ ಹೀನಾಯ ಸ್ಥಿತಿಯನ್ನು ತಲುಪಿದೆ ಎಂಬುದಕ್ಕೆ ಧ್ಯೂತಕವಾಗಿದೆ. ಈ ಇಬ್ಬರು ನಾಯಕರಿಗೆ ರಾಜ್ಯದ ಸಮಸ್ಯೆಗಿಂತ ವ್ಯಕ್ತಿಗತ ಜಗಳವೇ ಮುಖ್ಯವಾಗಿದೆ.

ಇನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ನಡುವಿನ ಕಂಬಳಿ ಜಗಳ ಕೂಡ ಇದೇ ರೀತಿಯ ಜಗಳ..ದೇಶದಲ್ಲಿ ಕೋಮುವಾದ ಹೆಡೆ ಬಿಚ್ಚಿ ನರ್ತಿಸುತ್ತಿದೆ.. ನಾಗರಿಕ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ.. ಬೆಲೆ ಏರಿಕೆಯಿಂದ ಜನ ಬೀದಿಗೆರ್ ಬಿದ್ದಿದ್ದಾರೆ. ಕೃಷಿ ಕ್ಷೇತ್ರ ಮಹತ್ವ ಕಳೆದುಕೊಳ್ಳುತ್ತಿದೆ. ಕಾರ್ಪುರೇಟ್ ಜಗತ್ತಿಗೆ ಎಲ್ಲವನ್ನೂ ಮಾರಾಟ ಮಾಡಲಾಗುತ್ತಿದೆ.. ಸರ್ಕಾರಿ ಆಸ್ತಿಯ ಪರಭಾರೆ ಮಾಡಲಾಗುತ್ತಿದೆ.. ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ.. ದೇಶ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ.

ಇದ್ಯಾವುದೂ ಕೂಡ ಈ ಕಚ್ಚಾಟದ ನಾಯಕರಿಗೆ ಮುಖ್ಯ ಅನ್ನಿಸುತ್ತಲೇ ಇಲ್ಲ.

ಈ ನಡುವೆ ಜೆಡಿಎಸ್ ಮತ್ತೆ ಪ್ರಾದೇಶಿಕ ರಾಜಕಾರಣ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡಿಕರಣಕ್ಕೆ ಹೊರಟಿದೆ.. ಜೊತೆಗೆ ಬಿಜೆಪಿ ಗೆದ್ದರೆ ಗೆಲ್ಲಲಿ, ಸಿದ್ದರಾಮಯ್ಯನವರಿಗೆ ಮಹತ್ವ ಇರುವ ಕಾಂಗ್ರೆಸ್ ಗೆಲ್ಲಕೂಡದು ಎಂಬ ತೀರ್ಮಾನಕ್ಕೆ ಬಂದ ಜೆಡಿಎಸ್ ಭಸ್ಮಾಸುರ ರಾಜಕಾರಣ ಮಾಡುತ್ತಿದೆ,, ಆರ್ ಎಸ್ ಎಸ್ ಅನ್ನು ಬಲವಾಗಿ ಟೀಕಿಸುತ್ತ ಮುಸ್ಲೀಂ ಮತವನ್ನು ಆದಷ್ಟು ಪಡೆಯೋಣ ಎಂದು ತೀರ್ಮಾನಿಸಿರುವ ಕುಮಾರಸ್ವಾಮಿ ಮತ್ತು ಹೆಚ್,ಡಿ. ದೇವೇಗೌಡರು ಬೆಡ್ ರೂಮಿನಲ್ಲಿ ಈಗ ದೊಡ್ಡ ಗಣಾಚಾರಿಯಾಗಲು ಹೊರಟಿರುವ ಮುಖ್ಯಮಂತ್ರಿ ಬೊಮ್ಮಾಯಿಯವನ್ನು ಭೇಟಿ ಮಾಡಿ ಅವರಿಗೆ ಆಶೀರ್ವಾದ ಮಾಡುತ್ತಾರೆ. ನಮ್ಮಿಂದ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡುತ್ತಾರೆ.

ಈಗ ಆರ್ ಎಸ್ ಎಸ್ ಕಾರ್ಯಕರ್ತರಾಗಿ ಬದಲಾಗುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಅಪ್ಪ ಅಮ್ಮ ಇಲ್ಲ, ನೀವೇ ಅಪ್ಪ ಅಮ್ಮ ಎಂದು ದೇವೇಗೌಡರ ಕಾಲಿಗೆ ಬೀಳುತ್ತಾರೆ, ಈ ಸಂದರ್ಭದಲ್ಲಿ ದೇವೇಗೌಡರು ತಮ್ಮ ತಂದೆ ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರವನ್ನೂ ಎಂಟು ತಿಂಗಳ ಒಳಗೆ ಉರುಳಿಸಿದ್ದು ಬೊಮ್ಮಾಯಿ ಅವರಿಗೆ ನೆನಪಿನಲ್ಲಿ ಇರುವುದಿಲ್ಲ…
ಇದು ಇವತ್ತಿನ ರಾಜಕಾರಣದ ಮಾಧರಿ ಎಂದು ನನಗೆ ಅನ್ನಿಸುತ್ತದೆ….

ಇಲ್ಲಿ ಎಲ್ಲರೂ ಮುಖವಾಡ ಧರಿಸಿದ್ದಾರೆ.. ಇವರ ನಿಜವಾದ ಮುಖ ದರ್ಶನ ಯಾವಾಗ ಆಗುತ್ತದೇಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇವತ್ತಿನ ರಾಜಕಾರಣ ಮೌಲಿಕತೆಯನ್ನು ಕಳೆದುಕೊಂಡಿದೆ, ಎಲ್ಲರೂ ಅಂಗಡಿ ತೆಗೆದು ಕುಳಿತ ವ್ಯಾಪಾರಿಗಳಂತೆ ಕಾಣುತ್ತಾರೆ..

ಶಶಿಧರ್ ಭಟ್

ಪ್ರಧಾನ ಸಂಪಾದಕರು, ಬಾಲಾಜಿ ಮಿಡಿಯಾ ಗ್ರೂಪ್​​​​

Related Articles

Leave a Reply

Your email address will not be published.

Back to top button