ಬೆಳಗಾವಿ: ಮನೆ ಕುಸಿದು ಒಂದೇ ಮನೆಯ ಏಳು ಮಂದಿ ಸಾವು
ಬೆಳಗಾವಿ: ಭಾರಿ ಮಳೆಗೆ ಮನೆ ಕುಸಿದ ಪರಿಣಾಮ ಒಂದೇ ಮನೆಯ ಏಳು ಜನರು ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸಂಭವಿಸಿದೆ.
ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಾಧ್ಯಂತ ದೊಡ್ಡ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಮಳೆ ನೀರಿಗೆ ನೆನೆದು ಬಡಾಲ ಅಂಕಲಗಿ ಗ್ರಾಮದದಲ್ಲಿ ಮನೆ ಕುಸಿದಿದೆ. ಗ್ರಾಮದ ಭೀಮಪ್ಪ ಖನಗಾವಿ ಕುಟುಂಬದ ಮನೆ ಕುಸಿದು ಬಿದ್ದಿದ್ದು. ಮನೆಯಲ್ಲಿದ್ದ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತರಾಗಿದ್ದಾರೆ. ಗಂಗವ್ವ ಖನಗಾವಿ (50), ಸತ್ಯವ್ವ ಖನಗಾವಿ (45), ಪೂಜಾ ಖನಗಾವಿ(8), ಸವಿತಾ ಖನಗಾವಿ (28), ಲಕ್ಷ್ಮೀ ಖನಗಾವಿ(15), ಅರ್ಜುನ್ ಖನಗಾವಿ, ಕಾಶವ್ವ ಕೊಳೆಪ್ಪನವರ್ ಮೃತ ದುರ್ದೈವಿಗಳು.
ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ,ಸದ್ಯ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎಸ್ಡಿಆರ್ಎಫ್ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಸ್ಥಳಕ್ಕೆ ದೌಡಾಯಿಸಿದ್ದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದು , ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.