Latest

ರಾಜ್ಯವನ್ನು ಆರೋಗ್ಯ ಕರ್ನಾಟಕವನ್ನಾಗಿಸಲು ಸಂಕಲ್ಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯವನ್ನು ಆರೋಗ್ಯ ಕರ್ನಾಟಕವನ್ನಾಗಿಸಲು ಸಂಕಲ್ಪ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ,ಅವರು ಮಾತನಾಡಿದರು.

ಬೆಂಗಳೂರು ನಗರ ಸೇರಿದಂತೆ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ನಾಗರಿಕರಿಗೆ ಈ ಸಂಸ್ಥೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. ಎಸ್ ಸಿ/ ಎಸ್ ಟಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಡ ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಉಚಿತ ಅಂಗಾಂಗ ಕಸಿ ಚಿಕಿತ್ಸೆ ದೊರೆಯಲಿದೆ. ಶಾಶ್ವತವಾದ ಆರೋಗ್ಯ ಕರ್ನಾಟಕವನ್ನು ನಿರ್ಮಿಸಲು ಆರೋಗ್ಯ ಕ್ಷೇತ್ರದ ಮುನ್ನೋಟವನ್ನು ರಾಜ್ಯದ ಆರೋಗ್ಯ ಸಚಿವರ ನೇತೃತ್ವದಲ್ಲಿ ಸಿದ್ಧಪಡಿಸಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ತಿಳಿಸಿದರು.

ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ನಲ್ಲಿ ಆಧುನಿಕ ಹಾಗೂ ವಿಶ್ವದರ್ಜೆಯ ಚಿಕಿತ್ಸೆ ಲಭ್ಯವಿದೆ. ಈಗಿನ ಆಹಾರ ಪದ್ದತಿ, ಜೀವನಶೈಲಿ ಯಿಂದಾಗಿ ಗ್ಯಾಸ್ಟ್ರೋಎಂಟ್ರಾಲಜಿ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಇದರ ಚಿಕಿತ್ಸೆಗೆ ಈ ಸಂಸ್ಥೆ ಸಹಕಾರಿಯಾಗಿದೆ. ಅಂಗಾಂಗ ಕಸಿ ಇತ್ತೀಚೆಗೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ವಿಜ್ಞಾನ ಅಭಿವೃದ್ಧಿಯ ಜೊತೆಗೆ ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಂಡು ರಾಜ್ಯದ ಆರೋಗ್ಯ ಅಭಿವೃದ್ಧಿಗೊಳಿಸುವುದು ಪ್ರಗತಿಶೀಲ ಸರ್ಕಾರದ ಕುರುಹು. ವಿಶ್ವದರ್ಜೆಯ ಚಿಕಿತ್ಸೆಯನ್ನು ಈ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದು, ರೋಗಿಗಳು ಇದರ ಲಾಭ ಪಡೆಯುವಂತೆ ಮನವಿ ಮಾಡಿದರು.

ದೇಶದ ನಾಗರಿಕ ಸ್ವಸ್ಥವಾಗಿದ್ದರೆ ದೇಶ ಸ್ವಸ್ಥ : ಕೇಂದ್ರ ಆರೋಗ್ಯ ಸಚಿವ

ಬಡವ ಶ್ರೀಮಂತನೆಂಬ ಬೇಧವಿರದೆ ಆರೋಗ್ಯ ಸಮಸ್ಯೆ ಎಲ್ಲರಿಗೂ ಬರುತ್ತದೆ. ಲಿವರ್ ಅಂಗ ಕಸಿ ಚಿಕಿತ್ಸೆ ಬಹಳ ದುಬಾರಿ ಚಿಕಿತ್ಸೆಯಾಗಿದ್ದು, ಎಸ್ ಸಿ/ ಎಸ್ ಟಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಡ ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಉಚಿತ ಅಂಗಾಂಗ ಕಸಿ ಚಿಕಿತ್ಸೆ ನೀಡುತ್ತಿರುವುದು ಅಭಿನಂದನೀಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ‌ಸಚಿವ ಡಾ. ಮನ್ಸುಖ್ ಎಲ್ ಮಾಂಡವೀಯ ತಿಳಿಸಿದರು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯಕ್ಕೆ ಹೆಲ್ತ್ ವಿಷನ್ ನ್ನು ಸಿದ್ಧಪಡಿಸಿ ಆರೋಗ್ಯ ಸೇವೆ ಹಾಗೂ ಆರೋಗ್ಯ ಮೂಲಸೌಕರ್ಯದ ಅಭಿವೃದ್ಧಿಗೆ ದೀರ್ಘಕಾಲಿಕ ಯೋಜನೆ ಹಮ್ಮಿಕೊಂಡಿದ್ದಾರೆ.ಇದು ಪ್ರಧಾನಿ ಮೋದಿಯವರ ಆರೋಗ್ಯ ಆಭಿವೃದ್ಧಿ ಹಾಗೂ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯ ಆಶಯಕ್ಕೆ ಪೂರಕವಾಗಿದೆ ಎಂದು ಅವರು ಹೇಳಿದರು.

ಬಡವರ ಆರೋಗ್ಯದ ಹಿತರಕ್ಷಣೆಯಿಂದ ಅಂತ್ಯೋದಯ ಆಧಾರದಲ್ಲಿ ಆಯುಷ್ಮಾನ್ ಭಾರತ ಯೋಜನೆ ಜಾರಿಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅಭಿವೃದ್ಧಿ ತಲುಪಬೇಕು . ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

Related Articles

Leave a Reply

Your email address will not be published.

Back to top button