Latestಸಿನಿಮಾ

ಪುನೀತ್ ರಾಜಕುಮಾರ್ ನೇತ್ರದಾನ ಹಿನ್ನೆಲೆ: 60ಕ್ಕೂ ಹೆಚ್ಚು ಮಂದಿಯಿಂದ ಕಣ್ಣುದಾನಕ್ಕೆ ನಿರ್ಧಾರ…!

ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಾವಿನಲ್ಲೂ ಮಾನವೀಯತೆ ಮೆರೆದಿದ್ದರು. ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದರು. ಇದು ನಾಲ್ವರಿಗೆ ಬೆಳಕು‌ ನೀಡಿತ್ತು. ಆ ಬಳಿಕ ನೇತ್ರದಾನ ಮಾಡುವವರ ಸಂಖ್ಯೆ ದಿನೇ ದಿನೇ‌ ಹೆಚ್ಚಾಗುತ್ತಿದೆ. ಪುನೀತ್ ರಾಜಕುಮಾರ್ ಅವರು ಹಾಕಿಕೊಟ್ಟ ಮಾರ್ಗವನ್ನು ಹಲವರು ಅನುಸರಿಸತೊಡಗಿದ್ದಾರೆ. ಜೊತೆಗೆ ತಮ್ಮ‌ಕಣ್ಣುಗಳನ್ನು ದಾನ ಮಾಡುವ ಮೂಲಕ‌ ಮಾನವೀಯ ನಿರ್ಧಾರ ತೆಗೆದುಕೊಂಡಿದ್ದಾರೆ.

ನಟ ಪುನೀತ್ ರಾಜಕುಮಾರ್ ಅವರ ಈ ಕಾರ್ಯ ಈಗ ಒಂದು ಗ್ರಾಮದ ಮೇಲೆ ಪರಿಣಾಮ ಬೀರಿದೆ. ಈ ಗ್ರಾಮದ ಬರೋಬ್ಬರಿ 60ಕ್ಕೂ ಜನರು ಕಣ್ಣು ದಾನ ಮಾಡಲು ನಿರ್ಧಾರ ಮಾಡಿದ್ದಾರೆ‌. ಜೊತೆಗೆ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಇಂಥ‌ ನಿರ್ಧಾರ ತೆಗೆದುಕೊಂಡಿರುವುದು ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡಾದ ಜನರು. ಅಪ್ಪುಗೆ ಗೌರವ ಸಲ್ಲಿಸಲು ಬಂಜಾರ ಸಮುದಾಯದ 60ಕ್ಕೂ ಅಧಿಕ ಯುವಕರು, ಯುವತಿಯರು ಹಾಗೂ ಗ್ರಾಮದ ಜನರು ನೇತ್ರದಾನ ಮಾಡುವ ಸಂಕಲ್ಪ ತೊಟ್ಟಿದ್ದಾರೆ.

ಪುನೀತ್ ಅಗಲಿಕೆಯ ಬಳಿಕ ಇಡೀ ಗ್ರಾಮವೇ ಶೋಕದ ಮಡುವಿನಲ್ಲಿ ಮುಳುಗಿತ್ತು. ಪುನೀತ್ ರಾಜಕುಮಾರ್ ಸಾವನ್ನಪ್ಪಿದ ದಿನವಂತೂ ಗ್ರಾಮದ ಜನರು ಊಟವನ್ನೇ ಮಾಡಿರಲಿಲ್ಲ. ಕಣ್ಣೀರು ಸುರಿಸಿದ್ದರು‌. ಪುನೀತ್ ರಾಜಕುಮಾರ್ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದ್ರೆ ಪುನೀತ್ ರಾಜಕುಮಾರ್ ಅವರು ನೇತ್ರದಾನ ಮಾಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಟಸಾರ್ವಭೌಮನಿಗೆ ಅರ್ಥಪೂರ್ಣವಾಗಿ ಗೌರವ ಸಲ್ಲಿಸುವ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬಂದಿದ್ದಾರೆ.

ಒಂದು ವಾರ ಶೋಕದಲ್ಲಿ ಮುಳುಗಿದ್ದ ಚಟ್ಟೋಬನಹಳ್ಳಿ ಗ್ರಾಮಸ್ಥರ ನೋವು ಇನ್ನೂ ಕಡಿಮೆಯಾಗಿಲ್ಲ. ಪುನೀತ್ ಅವರ ಆದರ್ಶ ಮೈಗೂಡಿಸಿಕೊಳ್ಳುವ ಮೂಲಕ 60ಕ್ಕೂ ಅಧಿಕ ಮಂದಿ ಕಣ್ಣು ದಾನ ಮಾಡಿ ಪುನೀತ್ ಗೆ ಗೌರವ ಸಲ್ಲಿಸುವ ಕೆಲಸವನ್ನು ಚಟ್ಟೋಬಹಳ್ಳಿ ಗ್ರಾಮಸ್ಥರು ಮಾಡಿದ್ದಾರೆ.

ಅಪ್ಪು ಅನೇಕ ಜನರಿಗೆ ಸಹಾಯ ಮಾಡಿದ್ದಲ್ಲದೆ ಕಣ್ಣು ದಾನ ಮಾಡಿದ್ದರು. ಅವರು ಕಣ್ಣು ದಾನ ಮಾಡಿದ್ದಕ್ಕೆ ಪುನೀತ್ ಅವರ ದಾರಿಯಲ್ಲೇ ಅಭಿಮಾನಿಗಳು ಹೋಗಲು ಶುರು ಮಾಡಿದ್ದಾರೆ‌. ಕೇವಲ 110 ಮನೆಗಳಿರೋ ಚಿಕ್ಕ ಊರಲ್ಲಿ 60ಕ್ಕೂ ಅಧಿಕ ಜನರು ಕಣ್ಣು ದಾನ ಮಾಡಲು ಮುಂದಾಗುವ ಮೂಲಕ ರಾಜ್ಯಕ್ಕೆ ಚಟ್ಟೋಬನಹಳ್ಳಿ ತಾಂಡ ಮಾದರಿಯಾಗಿದೆ.

Related Articles

Leave a Reply

Your email address will not be published.

Back to top button