Viral Video: ಬೆಲೆ ಏರಿಕೆಯ ಪರಿಣಾಮ: ಮಧ್ಯಪ್ರದೇಶದಲ್ಲಿ ಗುಜರಿ ಅಂಗಡಿ ಸೇರಿರುವ ಸಿಲಿಂಡರ್ಗಳು ವಿಡಿಯೋ ವೈರಲ್
ಭೋಪಾಲ್: ಬೆಲೆ ಏರಿಕೆಯ ಪರಿಣಾಮ ಖಾಲಿ ಎಲ್ಪಿಜಿ ಸಿಲಿಂಡರ್ಗಳು ಮಧ್ಯಪ್ರದೇಶದ ಗುಜುರಿ ಅಂಗಡಿ ಸೇರಿರುವ ಬಗೆಗಿನ ವೀಡಿಯೋ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಅಡುಗೆ ಅನಿಲ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇದರ ಫಲಾನುಭವಿಗಳು ಸಿಲಿಂಡರ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆಪಾದಿಸಿವೆ.
ಮಧ್ಯ ಪ್ರದೇಶದ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಭಿಂಡ್ ಜಿಲ್ಲೆಯ ಗುಜರಿ ಅಂಗಡಿಯಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ರಾಶಿ ಹಾಕಿರುವ ವೀಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ.
“ಸ್ಕ್ರಾಪ್ ಯಾರ್ಡ್ನಲ್ಲಿ ರಾಶಿ ಹಾಕಿರುವ ಸಿಲಿಂಡರ್ಗಳು ನರೇಂದ್ರ ಮೋದಿ ಆಡಳಿತದಲ್ಲಿ ಅನಿಯಂತ್ರಿತ ಹಣದುಬ್ಬರದ ಬಗ್ಗೆ ಸಾರಿ ಹೇಳುತ್ತವೆ” ಎಂದು ಕಮಲನಾಥ್ ಹೇಳಿದ್ದಾರೆ.
ಜಬಲ್ಪುರದಲ್ಲಿ ಉಜ್ವಲ ಯೋಜನೆಯ ಎರಡನೇ ಹಂತದ ಯೋಜನೆಯನ್ನು ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿ ಅದ್ದೂರಿಯಾಗಿ ಚಾಲನೆ ನೀಡಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಕಾರಣ ತಾವು ಎಲ್ಪಿಜಿ ಸಿಲಿಂಡರ್ ಮರು ಭರ್ತಿ ಮಾಡುವುದನ್ನು ಸ್ಥಗಿತಗೊಳಿಸಿರುವುದಾಗಿ ಹಲವು ಫಲಾನುಭವಿಗಳು ಹೇಳಿದ್ದಾರೆ