ಚಿಕ್ಕಮಗಳೂರು: ತಂದೆಯಿಂದಲೇ ಮಗಳ ಹತ್ಯೆ: ಆರೋಪಿ ಬಂಧನ
ಚಿಕ್ಕಮಗಳೂರು: ತಂದೆಯೋರ್ವ ತನ್ನ ಮಗಳನ್ನು ವೇಲ್ ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿ, ರೈಲ್ವೆ ಗೇಟ್ ಬಳಿಯ ಗುಂಡಿಯಲ್ಲಿ ಮೃತದೇಹವನ್ನು ಎಸೆದು ಹೋಗಿರುವ ಘಟನೆ ಚಿಚಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬೆಳಕಿಗೆ ಬಂದಿದೆ.
ಬೀರೂರಿನ ಬಿಎಚ್ ರಸ್ತೆಯ ರೈಲ್ವೆ ಗೇಟ್ ಬಳಿ ಘಟನೆ ನಡೆದಿದೆ. ರಾಧಾ (18) ಮೃತ ದುರ್ದೈವಿ. ಶಿವಮೊಗ್ಗ ಜಿಲ್ಲೆ, ಶಿಕಾರಿಪುರದ ಕೆಂಚೇಗೌಡನ ಕೊಪ್ಪಲಿನ ನಿವಾಸಿ ಚಂದ್ರಪ್ಪ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದು ಮನೆಮಂದಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಪ್ರಿಯತಮನಿಂದ ದೂರ ಇರಲು ಮನೆಯವರು ಎಚ್ಚರಿಸಿದರೂ ರಾಧಾ ಆತನೊಂದಿಗೆ ಪ್ರೇಮ ಮುಂದುವರಿಸಿ, ಆತನನ್ನೇ ವಿವಾಹವಾಗುತ್ತೇನೆಂದು ಹಠ ಹಿಡಿದಿದ್ದಳು ಎನ್ನಲಾಗಿದೆ.
ಮಗಳನ್ನು ದೂರದ ಊರಿಗೆ ಕಳುಹಿಸಿದರೆ ಹುಡುಗನನ್ನು ದೂರ ಮಾಡಬಹುದೆಂದು ಭಾವಿಸಿದ ಚಂದ್ರಪ್ಪ ಚನ್ನಗಿರಿಯ ತನ್ನ ಅಕ್ಕನ ಮನೆಗೆ ರಾಧಾಳನ್ನು ಬಿಟ್ಟು ಬಂದಿದ್ದಾನೆ. ಊರಿನಲ್ಲಿ ಹಬ್ಬವಿದ್ದ ಕಾರಣ ಬುಧವಾರ ದ್ವಿಚಕ್ರ ವಾಹನದಲ್ಲಿ ವಾಪಸ್ ಕರೆದುಕೊಂಡು ಬರುತ್ತಾ, ಮಧ್ಯೆ ಮಗಳಿಗೆ ಬುದ್ಧಿ ಹೇಳುತ್ತಾ ಬಂದಿದ್ದಾನೆ.
ತಂದೆಯ ಬುದ್ಧಿವಾದಕ್ಕೆ ತಲೆದೂಗದ ಮಗಳು ತಾನು ಅವನನ್ನೇ ಮದುವೆಯಾಗುವೆನೆಂದು ಹೇಳಿದ್ದಾಳೆ. ಈ ವೇಳೆ ಕೋಪಕ್ಕೆ ಬುದ್ಧಿ ಕೊಟ್ಟ ಚಂದ್ರಪ್ಪ ಬೀರೂರು ಮಾರ್ಗವಾಗಿ ಊರಿಗೆ ಬರುತ್ತಿದ್ದಾಗ ಹೊರವಲಯದ ರೈಲ್ವೆ ಗೇಟ್ ಬಳಿಯಲ್ಲಿ ಜನ ಓಡಾಟವಿಲ್ಲದ್ದನ್ನು ಗಮನಿಸಿ ರಾಧಾಳ ಕೊರಳಲ್ಲಿದ್ದ ವೇಲ್ ತೆಗೆದು ಕುತ್ತಿಗೆಗೆ ಬಿಗಿದಿದ್ದಾನೆ. ರಾಧಾ ಸ್ಥಳದಲ್ಲೇ ಮೃತಪಟ್ಟಿದ್ದನ್ನು ಖಾತ್ರಿಪಡಿಸಿಕೊಂಡ ಚಂದ್ರಪ್ಪ ಮಗಳ ಶವವನ್ನು ಅಲ್ಲೇ ಎಸೆದು ಹೋಗಿದ್ದ ಎನ್ನಲಾಗಿದೆ.