Latest

ಕುಡಿದ ಮತ್ತಿನಲ್ಲಿ ನಾಲ್ಕು ವರ್ಷದ ಮಗಳ ಕತ್ತು ಕೊಯ್ದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

ಕಲಬುರಗಿ: ತಂದೆಯೊಬ್ಬ ತನ್ನ ನಾಲ್ಕು ವರ್ಷದ ಹೆತ್ತ ಮಗಳ ಕತ್ತುಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಫಜಲಪುರ ತಾಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ನಡೆದಿದೆ.

ನಾಲ್ಕು ವರ್ಷದ ಪೂನಮ್‌ ತನ್ನ ತಂದೆಯಿಂದಲೇ ಹತ್ಯೆಯಾದ‌‌ ಮಗು.‌ ಅರ್ಜುನ ಕರಂಡೆ (27)‌‌ ಮಗುವಿನ ಕತ್ತು ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಡಿದ ಅಮಲಿನಲ್ಲಿ ಮಗಳನ್ನು ಹೊಲಕ್ಕೆ ಕರೆದೊಯ್ದು ಕತ್ತು ಸೀಳಿ ಸಾಯಿಸಿದ್ದಾನೆ.‌ ನಂತರ ಅಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪತಿ-ಪತ್ನಿ ನಡುವಿನ ಕಲಹ:

ಅಫಜಲಪುರ ತಾಲೂಕಿನ ಉಪ್ಪಾರವಾಡಿ ಗ್ರಾಮದ ಅರ್ಜುನ್ ಕರಂಡೆಗೆ ಮಹಾರಾಷ್ಟ್ರ ಮೂಲದ ಮಹಿಳೆಯೊಂದಿಗೆ ಮದುವೆಯಾಗಿತ್ತು. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿತ್ತು. ಗಂಡ ಹೆಂಡತಿ ನಡುವೆ ಪದೇ ಪದೆ ಜಗಳ ನಡೆದು ಮಹಿಳೆ ಮಕ್ಕಳನ್ನು‌ ಬಿಟ್ಟು ತನ್ನ ತವರಿಗೆ ಹೋಗುತ್ತಿದ್ದಳು ಎನ್ನಲಾಗಿದೆ.

ಒಂದೆರಡು ಬಾರಿ ಊರಿನ ಹಿರಿಯರು ಬುದ್ಧಿವಾದ ಹೇಳಿ ರಾಜಿ ಸಂಧಾನ ಕೂಡ ಮಾಡಿಸಿದ್ದಾರೆ. ಇದೇ ವಿಷಯವಾಗಿ ಅರ್ಜುನ್​ ಪತ್ನಿ ಮಹಾರಾಷ್ಟ್ರ ಮಹಿಳಾ ಆಯೋಗದ ಬಾಗಿಲು ಕೂಡ ತಟ್ಟಿದ್ದಳಂತೆ. ಹೀಗಾಗಿ ಅರ್ಜುನ್ ಮಕ್ಕಳೊಂದಿಗೆ ಪತ್ನಿಯ ತವರೂರಿಗೆ ತೆರಳಿ ವಾಸವಿದ್ದ. ಆದ್ರೆ ಅಲ್ಲಿಯೂ ಇಬ್ಬರ ನಡುವೆ ಜಗಳವಾಗಿದೆ.

ಪತ್ನಿಯ ತವರೂರಿನಿಂದ ಅರ್ಜುನ್ ಕೆಲವು ತಿಂಗಳ ಹಿಂದೆ ತನ್ನ ನಾಲ್ಕು ವರ್ಷದ ಪುತ್ರಿ, ಎರಡು ವರ್ಷದ ಪುತ್ರನೊಂದಿಗೆ ಸ್ವಗ್ರಾಮ ಉಪ್ಪಾರವಾಡಿಗೆ ಬಂದು ಜೀವನ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹದಿಂದ ಅರ್ಜುನ್ ಕುಡಿತದ ದಾಸನೂ ಆಗಿದ್ದ. ಕಳೆದ ಬುಧವಾರ ರಾತ್ರಿ ತನ್ನ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ಇಬ್ಬರ ನಡುವೆ ಏನಾಗಿದೆ ಏನೋ ಗೊತ್ತಿಲ್ಲ. ನೇರವಾಗಿ ತನ್ನ ತಮ್ಮನಿಗೆ ಕರೆಮಾಡಿ ಮಗನನ್ನು ಚೆನ್ನಾಗಿ ನೋಡಿಕೋ ಅಂತ ಹೇಳಿ ಮಗಳನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Leave a Reply

Your email address will not be published.

Back to top button