Siddapur Crime News: ಉತ್ತರ ಕನ್ನಡ: ಕುಡಿದ ಮತ್ತಿನಲ್ಲಿ ತಾಯಿ, ಅಕ್ಕನಿಗೆ ಗುಂಡು ಹಾರಿಸಿ ಹತ್ಯೆ
ಕಾರವಾರ : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಷಯಕ್ಕೆ ತಾಯಿ ಹಾಗೂ ಅಕ್ಕಳನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದದಲ್ಲಿ ನಡೆದಿದೆ.
ಜಯವಂತ ಯಾನೆ ಮಂಜುನಾಥ ನಾರಾಯಣ ಹಸಲರ್ ಕೊಲೆಗೈದ ಆರೋಪಿಯಾಗಿದ್ದು, ತಾಯಿ ಪಾರ್ವತಿ ಹಾಗೂ ಅಕ್ಕ ರಮ್ಯಾ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ನವರಾತ್ರಿ ಹಬ್ಬದ ನಿಮಿತ್ತ ವಾಡಿಕೆಯಂತೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಕಾರಣಕ್ಕೆ ಅಡುಗೆ ಮಾಡಲು ವಿಳಂಬವಾಗಿದೆ.ಆರೋಪಿ ನಾಡ ಬಂದುಕನ್ನು ತೆಗೆದುಕೊಂಡು ಮಧ್ಯಾಹ್ನದ ಹೊತ್ತಿಗೆ ಕಾಡು ಪ್ರಾಣಿ ಭೇಟೆಗೆ ತೆರಳಿದ್ದ ಎನ್ನಲಾಗಿದೆ. ಮನೆಗೆ ಬಂದಾಗ ಊಟದ ವಿಷಯದಲ್ಲಿ ಗಲಾಟೆ ತೆಗೆದಿದ್ದ ಪಾಪಿ ಮಂಜುನಾಥ ಕೈಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ತಾಯಿ ಹಾಗೂ ಅಕ್ಕನಿಗೆ ಹೊಡೆದು ಕೊಂದಿದ್ದಾನೆ.
ಈ ವೇಳೆ ಇಬ್ಬರೂ ಸ್ಥಳದಲ್ಲೇ ಸಾವು ಕಂಡಿದ್ದಾರೆ.ಘಟನೆ ನಡೆಯುವ ವೇಳೆ ತಂದೆ ನಾರಾಯಣ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.ಕಾಡಿನಂಚಿನಲ್ಲಿ ಈ ಘಟನೆ ನಡೆದಿದ್ದು,ಸಿದ್ಧಾಪುರ ತಾಲೂಕಿನಿಂದ ಕುಡಗುಂದ ಗ್ರಾಮ ಸುಮಾರು 35 ಕಿ.ಮೀ.ದೂರದಲ್ಲಿದೆ. ಪ್ರಕರಣ ಮುಚ್ಚಿ ಹಾಕಲು ಊರ ಜನ ನಿರ್ಧರಿಸಿದ್ದರು ಎನ್ನಲಾಗಿದೆ.
ತಡರಾತ್ರಿ ಸಿದ್ಧಾಪುರ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.