Latest

ಮೆಕ್ಕೆಜೋಳ ಖರೀದಿಸಿ ರೈತರು, ವರ್ತಕರಿಗೆ ಮೋಸ: ದಾವಣಗೆರೆ ಪೊಲೀಸರಿಂದ 2,68,91,470 ರೂ. ನಗದು ವಶ…!

ದಾವಣಗೆರೆ: ರೈತರು ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿ ಮಾಡಿ ಹಣ ಕೊಡದೇ ಮೋಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಆರ್ ಎಂ ಸಿ ಯಾರ್ಡ್ ಪೊಲೀಸರು, 2 ಕೋಟಿ 68 ಲಕ್ಷದ 91 ಸಾವಿರದ ನಾಲ್ಕುನೂರ ಎಪ್ಪತ್ತು ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದ ದಲ್ಲಾಳಿ ವ್ಯಾಪಾರ ಮಾಡುತ್ತಿದ್ದ ಶಿವಲಿಂಗಯ್ಯ, ದಾವಣಗೆರೆ ತಾಲೂಕಿನ ನರಗನಹಳ್ಳಿಯ ದಲ್ಲಾಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್, ಸರಸ್ವತಿ ನಗರದ ಕಂಟ್ರಾಕ್ಟರ್ ಮಹೇಶ್ವರಯ್ಯ, ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಮದ ವಾಗೀಶ್, ಚಂದ್ರು ಹಾಗೂ ಪಿಬಿ ರಸ್ತೆಯ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಎಂಬುವವರಿಂದ ಈ ಹಣ ವಸೂಲಿ ಮಾಡಲಾಗಿದೆ. ಈ ಆರು ಮಂದಿಯೂ ಈಗ ಕೋರ್ಟ್ ನಲ್ಲಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಈಗ ವಸೂಲಿ ಮಾಡಿರುವ ಹಣವನ್ನು ಕೋರ್ಟ್ ಗೆ ಸಲ್ಲಿಸಿ ನಂತರ ಇವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್ಪಿ ರಿಷ್ಯಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏನಿದು ಪ್ರಕರಣ…?

ದಾವಣಗೆರೆ ನಗರದ ಆಂಜನೇಯ ಏಜೆನ್ಸೀಸ್ ಮಾಲೀಕ ಎಂ. ಆರ್. ಸಂತೋಷ್ ಅವರು ದಾವಣಗೆರೆಯ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಲ್ಲಿ 2021ರ ಮಾರ್ಚ್ 17ರಂದು ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ ಎಂಬುವವರಿಗೆ ಸೇರಿದ ಕೆ. ಸಿ. ಟ್ರೇಡರ್ಸ್ ಮತ್ತು ಜಿಎಂಸಿ ಗ್ರೂಪ್ಸ್ ಗೆ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದೆವು. 15 ರಿಂದ 20 ದಿನಗೊಳಗಾಗಿ ಶಿವಲಿಂಗಯ್ಯನವರು ರೈತರು ಮತ್ತು ವರ್ತಕರಿಗೆ ಮೆಕ್ಕೆಜೋಳದ ಹಣ ಸಂದಾಯ ಮಾಡುತ್ತಿದ್ದರು. ಅದರಂತೆ ರೈತರು ಮತ್ತು ವರ್ತಕರಿಂದ ಮೆಕ್ಕೆಜೋಳವನ್ನು ಶಿವಲಿಂಗಯ್ಯ ಖರೀದಿ ಮಾಡಿದ್ದರು. ಆದ್ರೆ, ಒಟ್ಟು 47,42,439 ರೂಪಾಯಿ ಬಾಕಿ ಕೊಡಬೇಕಿತ್ತು. ಕೇಳಿದರೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ರೈತರು ಮತ್ತು ವರ್ತಕರಿಗೆ ನೀಡಬೇಕಿರುವ ಶಿವಲಿಂಗಯ್ಯನವರ ಬಳಿ ಕೇಳಿದೆ. ಈ ವೇಳೆ ಮೆಕ್ಕೆಜೋಳದ ಹಣವನ್ನು ನನ್ನ ಬ್ಯಾಂಕ್ ಖಾತೆಯಿಂದ ಆರ್ ಟಿ ಜಿ ಎಸ್ ಮತ್ತು ಕ್ಯಾಶ್ ಮೂಲಕ ನಮ್ಮ ಸಂಬಂಧಿ ಚೇತನ್, ವಾಗೀಶ್, ಚಂದ್ರ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಅವರು ತಮ್ಮ ಸ್ವಂತ ಹಾಗೂ ಪರಿಚಯಸ್ಥರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ರೈತರು ಹಾಗೂ ವರ್ತಕರಿಗೆ ನೀಡಬೇಕಿರುವ ಹಣ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಶಿವಲಿಂಗಯ್ಯ, ಚೇತನ್, ವಾಗೀಶ್, ಚಂದ್ರು, ಮಹೇಶ್ವರಯ್ಯ ಹಾಗೂ ಶಿವಕುಮಾರ್ ಅವರು ರೈತರು ಮತ್ತು ವರ್ತಕರಿಗೆ ಹಣ ಕೊಡದೇ ವಂಚಿಸಿರುವುದಾಗಿ ಪೊಲೀಸ್
ಠಾಣೆಗೆ ನೀಡಿದ್ದ ದೂರಿನಲ್ಲಿ ಆರೋಪಿಸಿದ್ದರು.

ಮೆಕ್ಕೆಜೋಳ ಖರೀದಿ ಮಾಡಿ ವಂಚಿಸಿದ ಮತ್ತೊಂದು ಪ್ರಕರಣವೂ ಇದೇ ಠಾಣೆಯಲ್ಲಿಯೇ ದಾಖಲಾಗಿತ್ತು. ಈ ಇಬ್ಬರು ಮಾತ್ರವಲ್ಲ, ಬರೋಬ್ಬರಿ 96 ರೈತರು ಹಾಗೂ 29 ವರ್ತಕರಿಗೆ ಬಾಕಿ ಹಣ ಕೊಡಬೇಕು ಎಂದು ಆರೋಪಿಸಿ ರೈತರು ಕೆ. ಸಿ. ಟ್ರೇಡರ್ಸ್ ಮತ್ತು ಜಿಎಂಸಿ ಗ್ರೂಪ್ಸ್ ವಿರುದ್ಧವೂ ದೂರು ನೀಡಿದ್ದರು. ಬಡಾವಣೆ, ವಿದ್ಯಾನಗರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಈ ಎಲ್ಲಾ ಪ್ರಕರಣಗಳ ಬಗ್ಗೆ ಆರ್ ಎಂಸಿ ಯಾರ್ಡ್ ಪೊಲೀಸರು ತನಿಖೆಗೆ ಇಳಿದರು.

ರೈತರಿಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ನ್ಯಾಯ ಕೊಡಿಸುವ ದೃಷ್ಟಿಯಿಂದ ಎಸ್ಪಿ ರಿಷ್ಯಂತ್ ಅವರು, ಡಿಸಿಆರ್ ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ. ಎಸ್. ಬಸವರಾಜ್ ನೇತೃತ್ವದ 13 ಪೊಲೀಸ್ ಸಿಬ್ಬಂದಿ ತಂಡ ರಚಿಸಿ ತನಿಖೆ ನಡೆಸುವಂತೆ ಸೂಚಿಸಿದರು. ಈ ಪ್ರಕರಣದ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ, ರೈತರು ಹಾಗೂ ವರ್ತಕರಿಗೆ ಆದ ಮೋಸದ ಹಣದಲ್ಲಿ 2, 68,91,470 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ರೈತರಿಗೆ ಮೋಸ ಮಾಡಿದ 1, 51,86,470 ರೂ ಅಂದರೆ ಶೇಕಡಾ ನೂರಕ್ಕೆ ನೂರರಷ್ಟು ಹಣ ವಶಪಡಿಸಿಕೊಳ್ಳಲಾಗಿದೆ. ವರ್ತಕರಿಗೆ ಮೋಸ ಮಾಡಿದ್ದ 1,17,05,000 ರೂಪಾಯಿಯನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿಗುಡಾಳು ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಸತ್ತವರ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಿ ಅದಕ್ಕೆ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದರು.

ಇನ್ನು ತೀವ್ರವಾಗಿ ಅಸ್ವಸ್ಥಗೊಂಡಿರುವವರ ಹೆಸರಿನಲ್ಲಿಯೂ ಇದೇ ರೀತಿ ಮಾಡಿದ್ದರು. ಈಗ ವಶಪಡಿಸಿಕೊಂಡಿರುವ ಹಣವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ. ಆನಂತರ ಆರೋಪಿಗಳನ್ನು ಬಂಧಿಸಲು ಅನುಮತಿ ಕೋರಲಾಗುವುದು. ಈಗಾಗಲೇ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದು, ಆರೋಪಿಗಳನ್ನು ಕೋರ್ಟ್ ನ ಅನುಮತಿ ಪಡೆದು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ರಿಷ್ಯಂತ್ ಮಾಹಿತಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button