ಸೋಲಿನೊಂದಿಗೆ ಬ್ರಾವೋ, ಗೇಲ್ ವಿದಾಯ
ಅಬುಧಾಬಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ಅಂತರದಲ್ಲಿ ಸೋಲನುಭವಿಸಿದೆ. ಇದರೊಂದಿಗೆ ಕ್ರಿಕೆಟ್ ದಿಗ್ಗಜ “ಯುನಿವರ್ಸಲ್ ಬಾಸ್” ಖ್ಯಾತಿಯ ಕ್ರಿಸ್ ಗೇಲ್ ಹಾಗೂ ಟಿ20 ಸ್ಪೆಷಲಿಸ್ಟ್ ಡ್ವೇನ್ ಬ್ರಾವೋಗೆ ಸೋಲಿನ ವಿದಾಯ ಸಿಕ್ಕಿದೆ.
ಬ್ರಾವೋ ಈಗಾಗಲೇ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದು, ಆದರೆ ಕ್ರಿಸ್ ಗೇಲ್ ಅಧಿಕೃತವಾಗಿ ಪ್ರಕಟಿಸಿಲ್ಲ. ಆಸೀಸ್ ವಿರುದ್ಧ ಅವರು 15 ರನ್ ಗಳಿಸಿ ನಿರ್ಗಮಿಸುವಾಗ ಕ್ರೀಡಾಂಗಣದಲ್ಲಿ ಬ್ಯಾಟ್ ಎತ್ತಿ ತಮ್ಮ ಕೊನೆಯ ಪಂದ್ಯ ಎಂಬುದನ್ನು ಸಾಂಕೇತಿಕವಾಗಿ ಸೂಚಿಸಿದ್ದರು. ವಿಂಡೀಸ್ ಎಲ್ಲ ಆಟಗಾರರೂ ಎದ್ದು ನಿಂತು ಗೇಲ್ ಗೆ ಅಭಿನಂದನೆ ಸಲ್ಲಿಸಿದರು. ಗೇಲ್ ಈ ಬಾರಿಯ ವಿಶ್ವಕಪ್ ನಲ್ಲಿ ಹಿಂದೆಂದೂ ತೋರದ ಕಳಪೆ ಪ್ರದರ್ಶನ ತೋರಿದ್ದರು.
ಈಗಾಗಲೇ ಸೆಮಿಫೈನಲ್ ಸ್ಪರ್ಧೆಯಿಂದ ನಿರ್ಗಮಿಸಿರುವ ವಿಂಡೀಸ್ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಯಿತು. ಕೀರನ್ ಪೊಲಾರ್ಡ್ ಅವರ 44 ರನ್ ನೆರವಿನಿಂದ 157 ರನ್ ಗಳಿಸಿತ್ತು. ಸಾಧಾರಣ ಮೊತ್ತವನ್ನು ಬೆಂಬತ್ತಿದ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅಜೇಯ 89 ರನ್ ಸಿಡಿಸುವ ಮೂಲಕ ಇನ್ನೂ 22 ಎಸೆತ ಬಾಕಿ ಇರುವಾಗಲೇ ಜಯದ ದಾಖಲಿಸಿತು.
ಈ ಜಯದಿಂದ ಆಸ್ಟ್ರೇಲಿಯಾ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತು.