Latest

ಕೆಪಿಸಿಸಿ ಅಧ್ಯಕ್ಷರ ಚಾರಿತ್ರ್ಯಕ್ಕೆ ಸಂಬಂಧಿಸಿ ಗುಸು ಗುಸು ಮಾತು : ಎಂ.ಎ.ಸಲೀಂ ಆರು ವರ್ಷಗಳ ಕಾಲ ಉಚ್ಛಾಟನೆ

ಬೆಂಗಳೂರು: ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆ ಹೊಸ್ತಲಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಚಾರಿತ್ರ್ಯಕ್ಕೆ ಸಂಬಂಧಿಸಿದಂತೆ ಗುಸು ಗುಸು ಮಾತನಾಡಿರುವ ಪಕ್ಷ ಮುಖಂಡ ಹಾಗೂ ಮಾಧ್ಯಮ ಸಂಯೋಜಕ ಎಂ.ಎ.ಸಲೀಂ ಅವರನ್ನು ಪಕ್ಷದ ಪ್ರಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಉಚ್ಚಾಟಿಸಲಾಗಿದೆ.

ಹಗುರ ಮಾತಿನಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರಿಗೆ ಮೂರು ದಿನಗಳೊಳಗೆ ಸಮಜಾಯಿಷಿ ನೀಡುವಂತೆ ಕಾರಣ ಕೋರಿ ನೊಟೀಸ್ ಜಾರಿ ಮಾಡಲಾಗಿದೆ.

ಇಬ್ಬರೂ ಮುಖಂಡರ ವಿರುದ್ಧ ಪಕ್ಷದ ಶಿಸ್ತುಪಾಲನಾ ಸಮಿತಿ ಈ ಕ್ರಮಗಳನ್ನು ಕೈಗೊಂಡಿದೆ. ಪಕ್ಷದ ಶಿಸ್ತುಪಾಲನಾ ಸಮಿತಿಯ ತುರ್ತು ಸಭೆಯಲ್ಲಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಅ.12ರ ಮಂಗಳವಾರ ಎಂ.ಎ.ಸಲೀಂ ಅವರು ವಿ.ಎಸ್.ಉಗ್ರಪ್ಪ ಅವರೊಂದಿಗೆ ನಡೆಸಿದ ಖಾಸಗಿ ಮಾತುಕತೆಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಬಗ್ಗೆ ಹಾಗೂ ಬೇಜವಾಬ್ದಾರಿ ನಡುವಳಿಕೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳವರೆಗೆ ಉಚ್ಚಾಟಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಹಾಗೂ ಪಕ್ಷದ ಹಿರಿಯ ಮುಖಂಡ ಕೆ.ರೆಹಮಾನ್ ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಮುಖಂಡ ವಿ.ಎಸ್.ಉಗ್ರಪ್ಪ ಅವರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿರುವ ರೆಹಮಾನ್ ಖಾನ್, ಎಂ.ಎ.ಸಲೀಂ ಅವರೊಂದಿಗೆ ಖಾಸಗಿಯಾಗಿ ಮಾತನಾಡುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಘನತೆ ಗೌರವಗಳಿಗೆ ಕುಂದುಂಟಾಗುವಂತೆ ಮತ್ತು ಪಕ್ಷಕ್ಕೆ ಅಪಾರ ಹಾನಿಯನ್ನುಂಟು ಮಾಡುವ ಕೆಲ ವಿಚಾರಗಳ ಬಗ್ಗೆ ಮಾತನಾಡಿಕೊಂಡಿರುವುದು ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಉಭಯತ್ರರು ಪರಸ್ಪರ ಮಾತನಾಡಿಕೊಂಡಿರುವ ವಿಚಾರಗಳು ಆಧಾರ ರಹಿತವಾಗಿದ್ದು ಪಕ್ಷ ಅದನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ ಮತ್ತು ಖಂಡಿಸುತ್ತದೆ ಎಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ.

ತಮ್ಮ ಈ ವರ್ತನೆ ಬಗ್ಗೆ ಮೂರು ದಿನಗಳ ಒಳಗಾಗಿ ಸಮಜಾಯಿಷಿ ನೀಡಬೇಕೆಂದು ಉಗ್ರಪ್ಪ ಅವರಿಗೆ ಪಕ್ಷ ಸೂಚಿಸಿದೆ.

Related Articles

Leave a Reply

Your email address will not be published. Required fields are marked *

Back to top button