Latest

B K Hariprasad: ಕೋವಿಡ್ ಸಾವಿನ ಚೀತ್ಕಾರ ಜನ ಮರೆತಿಲ್ಲ: ಲಸಿಕೆಯ ಸಂಭ್ರಮ ಬೇಕಿಲ್ಲ: ಬಿ ಕೆ ಹರಿಪ್ರಸಾದ್

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಅಸಮರ್ಥತೆಯಿಂದಾಗಿ ಕೋವಿಡ್ ನಿಂದ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಜನ ಔಷಧಿ, ಆಕ್ಸಿಜನ್, ಲಸಿಕೆ ಸಿಗದೆ ಪರದಾಟ ನಡೆಸಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು 100 ಕೋಟಿ ಡೋಸ್ ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಿಸಿ ಪ್ರಚಾರ ಪಡೆಯುವ ಬದಲು, ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು, 100 ಕೋಟಿ ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಿಸುತ್ತಾ ಪ್ರಚಾರ ಪಡೆಯುತ್ತಿರುವ ಕೇಂದ್ರ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಲಸಿಕೆ ನೀಡಲಾಗಿದೆ ಎಂಬುದನ್ನು ಜನರಿಗೆ ತಿಳಿಸಲಿ’ ಎಂದೂ ಆಗ್ರಹಿಸಿದರು.

‘ಇಂದು ದೇಶದ ಪ್ರಧಾನಿ ಹಾಗೂ ಆರೋಗ್ಯ ಸಚಿವರು 100 ಕೋಟಿ ಲಸಿಕೆ ನೀಡಿದ್ದೇವೆ ಎಂದು ಸಂಭ್ರಮಿಸುತ್ತಿದ್ದಾರೆ. ಕೋವಿಡ್ ಇಡೀ ವಿಶ್ವದಲ್ಲಿ ಜನರನ್ನು ಯಾವ ರೀತಿ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ನಾವೆಲ್ಲರೂ ನೋಡಿದ್ದೇವೆ. ಈ ಸಮಯದಲ್ಲಿ ಜನರಿಗೆ ಸ್ಪಂದಿಸುವ ವಿಚಾರದಲ್ಲಿ ಸರ್ಕಾರ ಹಾಗೂ ನಾವೆಲ್ಲ ವಿಫಲರಾಗಿದ್ದೇವೆ. ಈ ಸಂದರ್ಭದಲ್ಲಿ ಜನ ಸರ್ಕಾರದ ಮೇಲೆ ಅವಲಂಬಿಸುವುದು ಸಹಜ. ವಿರೋಧ ಪಕ್ಷವಾಗಿ ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ’ ಎಂದರು.

‘100 ಕೋಟಿ ಲಸಿಕೆ ವಿಚಾರ ಸಂಭ್ರಮಿಸುವ ವಿಚಾರವಲ್ಲ. ಪ್ರತಿಯೊಬ್ಬ ನಾಗರೀಕನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೋವಿಡ್ ಮಹಾಮಾರಿ ಸಂಕಟ ತಟ್ಟಿದೆ. ಈ ಮಧ್ಯೆ ಎಷ್ಟು ಜನ ಸತ್ತಿದ್ದಾರೆ ಎಂಬ ನೈಜ ಅಂಕಿ ಅಂಶ ಸರ್ಕಾರ ನೀಡುತ್ತಿಲ್ಲ. ಕೋವಿಡ್ ಬಂದಾಗ ಅವೈಜ್ಞಾನಿಕವಾಗಿ ಗಂಟೆ, ತಟ್ಟೆ ಬಾರಿಸಿದರೆ ಹೊರತು, ಅದನ್ನು ಯಾವ ರೀತಿ ಎದುರಿಸಬೇಕು ಎಂದು ಹೇಳುವ ಪ್ರಯತ್ನ ಮಾಡಲಿಲ್ಲ. ಆರೋಗ್ಯ ಸಚಿವರು ಇಂದು ನೀಡಿರುವ ಮಾಹಿತಿಯಲ್ಲಿ ಈ 100 ಕೋಟಿ ಲಸಿಕೆ ಕೊಟ್ಟಿರೋದು 1 ಲಸಿಕೆ ಮಾತ್ರ. ಅದಕ್ಕೆ ಇವರು ಸಂಭ್ರಮಿಸುತ್ತಿದ್ದಾರೆ. 70 ಕೋಟಿ ಜನರಿಗೆ ಒಂದು ಡೋಸ್, ಕೇವಲ 20-30 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲಾಗಿದೆ. ಇಡೀ ವಿಶ್ವದಲ್ಲೇ ಲಸಿಕೆ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತದಲ್ಲಿ ಇಷ್ಟು ದಿನಗಳಲ್ಲಿ ಕೇವಲ ಒಂದು ಡೋಸ್ ಮಾತ್ರ ನೀಡುತ್ತಿರುವುದು ಸಂಭ್ರಮಿಸುವ ವಿಚಾರವೇ?’ ಎಂದು ಪ್ರಶ್ನಿಸಿದರು.

ಬೇರೆ ರಾಷ್ಟ್ರಗಳಲ್ಲಿ ಈಗಾಗಲೇ ಎರಡು ಡೋಸ್ ಗಳ ಬಳಿಕ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡುತ್ತಿಲ್ಲ. ಇಂತಹ ವಿಚಾರವಾಗಿ ಅವರು ಮಾತನಾಡಿ ಜನರಿಗೆ ಧೈರ್ಯ ತುಂಬಬೇಕಾಗಿದೆ. ಎರಡು ವರ್ಷಗಳಿಂದ ಇವರು ಹೇಳುತ್ತಿರುವುದು 100 ಕೋಟಿ. ಕೇವಲ ಪದಪುಂಜಗಳ ಪ್ರಚಾರ ಯಾವುದೇ ಪ್ರಯೋಜನವಿಲ್ಲ. ಅಮೆರಿಕ 85 ದಿನಗಳಲ್ಲಿ ಮೊದಲ ಡೋಸ್ ಆಗಿ, ನಂತರ ಎರಡನೇ ಡೋಸ್ ಆಗಿ, ಈಗ ಬೂಸ್ಟರ್ ಡೋಸ್ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಲಸಿಕೆ ಸಿಗದ ಸಮಯದಲ್ಲಿ ಜನ ಪ್ರಾಣ ಭಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ 1500 ರಿಂದ 4000 ರೂ. ವರೆಗೂ ಹಣ ಪಾವತಿಸಿ ಹೆಚ್ಚಾಗಿ ಲಸಿಕೆ ಪಡೆದಿದ್ದಾರೆ. ಹೀಗಾಗಿ ಪ್ರಧಾನಮಂತ್ರಿಗಳು ಸಂಭ್ರಮಿಸುವ ಬದಲು ದೇಶದ ಜನರಲ್ಲಿ ಕ್ಷಮೆ ಕೋರಬೇಕು’ ಎಂದರು.

‘ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತರು, ನರ್ಸ್ ಸಿಬ್ಬಂದಿ, ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೇವಲ ಅಭಿನಂದನೆ ಸಲ್ಲಿಸಿದರೆ ಸಾಲದು. ಕೋವಿಡ್ ಬಂದಾಗ ಇವರಿಗೆ ಸರಿಯಾದ ರೀತಿಯಲ್ಲಿ ಭತ್ಯೆ, ಇತರೆ ಅನುಕೂಲ ನೀಡುವುದಾಗಿ ಹೇಳಿತ್ತು. ಆದರೆ ಈವರೆಗೂ ಆ ಬಗ್ಗೆ ಚಕಾರ ಎತ್ತಿಲ್ಲ. ಕೇವಲ ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಂಡರೆ ಪ್ರಯೋಜನೆವಿಲ್ಲ’ ಎಂದು ತಿಳಿಸಿದರು.

‘ವಿಶ್ವ ಆರೋಗ್ಯ ಸಂಸ್ಥೆ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡುದ್ದು, ಕೋವ್ಯಾಕ್ಸಿನ್ ಗೆ ಮಾನ್ಯತೆ ನೀಡಿಲ್ಲ. ಹೀಗಾಗಿ 100 ಕೋಟಿ ಲಸಿಕೆಯಲ್ಲಿ ಕೋವಿಶೀಲ್ಡ್ ಪಡೆದವರು ಎಷ್ಟು? ಕೋವ್ಯಾಕ್ಸಿನ್ ತೆಗೆದುಕೊಂಡವರು ಎಷ್ಟು ಎಂದು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಕೋವ್ಯಾಕ್ಸಿನ್ ಪಡೆದವರಿಗೆ ವಿದೇಶಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ. ವಿದೇಶದಲ್ಲಿ ಓದಲು ತೆರಳಬೇಕಾಗಿದ್ದ ವಿದ್ಯಾರ್ಥಿಗಳು ಕೋವ್ಯಾಕ್ಸಿನ್ ಪಡೆದು ಅಲ್ಲಿಗೆ ಹೋಗಲು ಸಾಧ್ಯವಾಗಿದೆ ಪರದಾಡುತ್ತಿದ್ದಾರೆ. ಹೀಗಾಗಿ 100 ಕೋಟಿಯಲ್ಲಿ ಎಷ್ಟು ಕೋವಿಶೀಲ್ಡ್ ಲಸಿಕೆ ಕೊಟ್ಟಿದ್ದಾರೆ ಎಂಬುದು ಮುಖ್ಯ’ ಎಂದು ತಿಳಿಸಿದರು.

‘ವಿಕೃತ ಮನಸ್ಥಿತಿಯವರು ಮಾತ್ರ 100 ಲಸಿಕೆ ಕೊಟ್ಟಿದ್ದೇವೆ ಎಂದು ಸಂಭ್ರಮಪಟ್ಟು ಪ್ರಚಾರ ಪಡೆಯುತ್ತಾರೆ. ದೇಶದ ಜನರಿಗೆ ಇಷ್ಟು ದಿನವಾದರೂ 2 ಡೋಸ್ ನೀಡಲು ಆಗಿಲ್ಲ, ಜನರು ಕಷ್ಟ ಅನುಭವುಸಿದ್ದು, ಈಗ ಸಂಭ್ರಮಿಸುವ ಬದಲು ಕ್ಷಮೆ ಕೊರಲಿ’ ಎಂದರು.

ಇನ್ನು ಕಾಂಗ್ರೆಸ್ ಅಪಪ್ರಚಾರ ಮಾಡಿದ್ದಕ್ಕೆ ಲಸಿಕೆ ವಿಚಾರದಲ್ಲಿ ಹಿನ್ನಡೆಯಾಗಿದೆ ಎಂಬ ಸಿ.ಟಿ ರವಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕುಣಿಯಲಾಗದವರು ನೆಲ ಡೊಂಕು ಎನ್ನುವ ಹಾಗೆ, ಕೋವಿಡ್ ಆರಂಭದಲ್ಲಿ ಸಗಣಿ ಬಳಿದುಕೊಳ್ಳಿ, ಗಂಜಲ ಕುಡಿಯಿರಿ, ಹಪ್ಪಳ ತಿನ್ನಿ, ಗಂಟೆ ಬಾರಿಸಿ, ದೀಪ ಹಚ್ಚಿ ಎಂದ ನೀವು ಎಂತಹ ಅವಿವೇಕಿಗಳು ಎಂದು ಇಡೀ ದೇಶ ನೋಡಿದೆ. ಭಾರತ ಸರ್ಕಾರದ ಈ ನಿರ್ಧಾರವನ್ನು ನೋಡಿ ಇಡೀ ಜಗತ್ತು ನಕ್ಕಿದೆ. ಮೋದಿ ಅವರ ಸ್ನೇಹಿತರಾದ ಬ್ರೆಜಿಲ್ ಅಧ್ಯಕ್ಷರು ಕೋವಿಡ್ ಸಮಯದಲ್ಲಿ ಇವರು ಮಾಡಿದ ಕ್ರಮಗಳು ಮಾನವೀಯತೆ ಮೇಲೆ ನಡೆದಿರುವ ದೌರ್ಜನ್ಯ ಎಂದು ಹೇಳಿದ್ದಾರೆ. ಹೀಗಾಗಿ ರವಿ ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಕೊಂಡಿರಲಿ. ಈ ವಿಚಾರವನ್ನು ಪ್ರಧಾನಿ, ಆರೋಗ್ಯ ಸಚಿವರೇ ಮಾತನಾಡಲು ಬಿಡಲಿ’ ಎಂದು ತಿರುಗೇಟು ಕೊಟ್ಟರು.

Related Articles

Leave a Reply

Your email address will not be published.

Back to top button