ರಾಹುಲ್ ಗಾಂಧಿ ಬಗ್ಗೆ ಕಟೀಲ್ ಹೇಳಿಕೆ : ಕ್ಷಮೆಯಾಚಿಸಲು ಕಾಂಗ್ರೆಸ್ ಆಗ್ರಹ
ಚಿಕ್ಕಮಗಳೂರು: ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರಿಗೆ ಯಾವ ನೈತಿಕತೆಯಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ಅಧ್ಯಕ್ಷ ಕಾರ್ತಿಕ್ ಜಿ ಚೆಟ್ಟಿಯಾರ್ ಪ್ರಶ್ನಿಸಿದ್ದಾರೆ.
ರಾಜೀವ್ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಗ್ಗಳಿಕೆ ನೆಹರೂ ಕುಟುಂಬದವರದ್ದು. ನಳಿನ್ ಕುಮಾರ್ ಕಟೀಲ್ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಹಾಗೂ ಸಂಸದರಾಗಿ ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರರಹಿತ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಕಟೀಲ್ ಅವರ ಕೊಳಕು ಮನಃಸ್ಥಿತಿಯನ್ನು ಅನಾವರಣಗೊಳಿಸಿದೆ. ದೇಶಕ್ಕಾಗಿ ಬಿಜೆಪಿಯವರ ತ್ಯಾಗವೇನು? ಕಟೀಲ್ ರವರ ಕೊಡುಗೆಯೇನು.? ಎಂಬುದನ್ನು ತಿಳಿಸಲಿ ಎಂದಿದ್ದಾರೆ.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಮತ್ತು ಪೆಡ್ಲರ್ ಎಂದು ಕಟೀಲ್ ಬಳಸಿರುವ ಭಾಷೆಯನ್ನು ಗಮನಿಸಿದಾಗ ಅವರು ಬೆಳೆದು ಬಂದಿರುವ ಸಂಸ್ಕಾರವನ್ನು ತೋರಿಸುತ್ತಿದೆ. ಕೀಳು ಮಟ್ಟದ ಸುಳ್ಳು ಹೇಳಿಕೆಯನ್ನು ತಕ್ಷಣವೇ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.