Latest

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನಿಂದ ಪಾದಯಾತ್ರೆ: ಸಿದ್ದರಾಮಯ್ಯ

ಬೆಂಗಳೂರು : ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಡಿಸೆಂಬರ್ ಮೊದಲ ವಾರ ಮೇಕೆದಾಟುವಿನಿಂದ ಬೆಂಗಳೂರು ವರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ, ಯೋಜನೆ ಜಾರಿಗೆ ಬೇರೆ ಯಾವ ತಕರಾರು ಇಲ್ಲದ ಕಾರಣ ರಾಜ್ಯ ಸರ್ಕಾರ ಕೂಡಲೇ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮೇಕೆದಾಟು ಯೋಜನೆಗೆ ತಮಿಳುನಾಡಿನವರು ಸುಮ್ಮನೆ ಕ್ಯಾತೆ ತೆಗೆಯುತ್ತಿದ್ದಾರೆ. ಆದರೆ ಅವರಿಗೆ ಈ ಯೋಜನೆಯಿಂದ ಯಾವುದೇ ತೊಂದರೆಯಾಗಲ್ಲ, ಒಂದಷ್ಟು ಲಾಭವಾಗುತ್ತದೆ. ವಿದ್ಯುತ್ ಉತ್ಪಾದನೆ, ಬೆಂಗಳೂರಿಗೆ ಕುಡಿಯುವ ನೀರಿನ ಜೊತೆಗೆ ಮೇಕೆದಾಟು ಅಣೆಕಟ್ಟಿನಲ್ಲಿ ನೀರು ಶೇಖರಣೆ ಆಗುವುದರಿಂದ ತಮಿಳುನಾಡಿನಲ್ಲಿ ನೀರಿನ ಅಭಾವ ಇದ್ದಾಗ ಅವರಿಗೆ ಅದನ್ನು ಉಪಯೋಗಿಸಿಕೊಳ್ಳಲು ಅವಕಾಶವಾಗುತ್ತದೆ ಎಂದರು.

ಯೋಜನೆ ಅನುಷ್ಠಾನವಾದ ಮೇಲೆ ಕೂಡ ಕಾವೇರಿ ಪ್ರಾಧಿಕಾರವು ನ್ಯಾಯಾಲಯದ ಆದೇಶದ ಅನುಸಾರ ತಮಿಳುನಾಡಿನ ಪಾಲಿನ ನೀರನ್ನು ಅವರಿಗೆ ಬಿಡುತ್ತದೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ವಿನಃ ಬೇರೆ ಯಾವ ಕಾರಣಗಳು ಇಲ್ಲ ಎಂದು ಹೇಳಿದರು.

ಮೇಕೆದಾಟು ಯೋಜನೆ ಜಾರಿ ಮಾಡಲು ನಮ್ಮ ರಾಜ್ಯಕ್ಕೆ ಕಾನೂನಾತ್ಮಕ ಸೇರಿದಂತೆ ಎಲ್ಲ ರೀತಿಯ ಹಕ್ಕುಗಳಿವೆ. ಸರ್ವೋಚ್ಚ ನ್ಯಾಯಾಲಯದ ಅಥವಾ ಇತರೆ ಯಾವುದೇ ತಕರಾರುಗಳು ಇಲ್ಲ. ಹೀಗಾಗಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಕೂಡಲೇ ಅನುಮತಿ ಪತ್ರ ನೀಡಬೇಕು ಹಾಗೂ ರಾಜ್ಯ ಸರ್ಕಾರ ಕೂಡಲೇ ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚುನಾವಣೆಗಾಗಿ ಅಥವಾ ಮತ ಗಳಿಕೆಗಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ. ನಮ್ಮ ಸರ್ಕಾರ ಮೇಕೆದಾಟು ಯೋಜನೆಯನ್ನು ರೂಪಿಸಿ, ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು. ಕೇಂದ್ರ ಸರ್ಕಾರ ಅನುಮತಿ ನೀಡದ ಕಾರಣಕ್ಕೆ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ ಎಂದರು.

ಕೃಷ್ಣ ಮೇಲ್ದಂಡೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಈ ಹಿಂದೆ ಪಾದಯಾತ್ರೆ ನಡೆಸಿ, ನಾವು ಅಧಿಕಾರಕ್ಕೆ ಬಂದರೆ ಸುಮಾರು 50,000 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದ್ದೆವು, ನಂತರ 2013 ರಲ್ಲಿ ನಾವು ಅಧಿಕಾರಕ್ಕೆ ಬಂದಮೇಲೆ ವಾರ್ಷಿಕ ಹತ್ತು ಸಾವಿರ ಕೋಟಿ ರೂಪಾಯಿಯಂತೆ ಐದು ವರ್ಷಗಳಲ್ಲಿ ರೂ. 50,000 ಕೋಟಿಗೂ ಅಧಿಕ ಹಣವನ್ನು ನೀರಾವರಿ ಉದ್ದೇಶಕ್ಕೆ ಖರ್ಚು ಮಾಡಿದ್ದೆವು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ನಮಗೆ ನಾಡಿನ ರೈತರ ಮತ್ತು ಜನರ ಹಿತ ಮುಖ್ಯ ಎಂದು ಸ್ಪಷ್ಟಪಡಿಸಿದರು.

ಸಿ.ಟಿ.ರವಿಗೆ ತಿರುಗೇಟು:

ಸಿ.ಟಿ ರವಿ ತಾವು ಭಾರತದ ಪರ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಕನ್ನಡಿಗರ ಪರ, ಕರ್ನಾಟಕದ ಪರ ಇದ್ದೇವೆ. ಮೇಕೆದಾಟು ಯೋಜನೆ ಶೀಘ್ರ ಜಾರಿಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ, ಈ ಪಾದಯಾತ್ರೆ ಸುಮಾರು 100 ಕಿ.ಮೀ ಗೂ ಹೆಚ್ಚಿನ ಮಾರ್ಗವನ್ನು ಒಳಗೊಳ್ಳಲಿದೆ. ಬೆಂಗಳೂರಿನಲ್ಲೂ ನಡೆಯಲಿದೆ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತಿತರ ಜಿಲ್ಲೆಗಳ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಪಾದಯಾತ್ರೆ ಯಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರಕಾರಗಳು ಮೇಕೆದಾಟು ಯೋಜನೆ ಆರಂಭಿಸಲು ಕಾನೂನಿನ ಯಾವುದೇ ಅಡೆತಡೆ ಇಲ್ಲ. ಆದರೂ ಈ ಎರಡೂ ಸರಕಾರಗಳು ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂದರು.

ಇದರಿಂದ ನ್ಯಾಯಾಧೀಕರಣ ಮತ್ತು ಪ್ರಾಧಿಕಾರದ ಆದೇಶದ ಅನ್ವಯ ಕರ್ನಾಟಕದ ಪಾಲಿಗೆ ಸಿಗಬೇಕಾದ ಕಾವೇರಿ ನೀರು ಅನ್ಯಾಯವಾಗಿ ಸಮುದ್ರದ ಪಾಲಾಗುತ್ತಿದೆ, ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ.14 ರಿಂದ ಸದಸ್ಯತ್ವ ನೋಂದಣಿ ಅಭಿಯಾನ:

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ 12 ವರ್ಷಗಳ ನಂತರ ಚುನಾವಣೆ ವೇಳಾಪಟ್ಟಿ ನಿಗದಿ ಮಾಡಿದ್ದು, ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು ಆರಂಭ ಮಾಡಿದೆ. ರಾಜ್ಯದ ನಾಯಕರೆಲ್ಲ ಸೇರಿ ಬೆಂಗಳೂರಿನಲ್ಲಿ ನ. 14 ರಂದು ಸದಸ್ಯತ್ವ ನೋಂದಣಿ ಆರಂಭಿಸಲು ತೀರ್ಮಾನಿಸಿದ್ದೇವೆ ಎಂದರು.

ಹಿಂದೆ ಸದಸ್ಯರಾಗಿ ಕೆಲಸ ಮಾಡಿರುವವರು ಕೂಡ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ಹೊಸದಾಗಿ ಸದಸ್ಯತ್ವ ಪಡೆಯುವವರು 5 ರೂ ಕಟ್ಟಿ ಅರ್ಜಿ ತುಂಬಬೇಕು. ಸಕ್ರಿಯ ಸದಸ್ಯರಾಗಲು 100 ಕಟ್ಟಬೇಕು. ನ. 14 ರಂದು ನೆಹರೂ ಅವರ ಜನ್ಮದಿನ. ಅದರ ಅಂಗವಾಗಿ ಈ ಕಾರ್ಯಕ್ರಮ ಆರಂಭಿಸಲು ತೀರ್ಮಾನ ಮಾಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ, ಬ್ಲಾಕ್ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು, ಎಲ್ಲ ಘಟಕದ ಪ್ರಮುಖ ನಾಯಕರು ಸೇರಿದಂತೆ ಪ್ರತಿ ನಾಯಕರನ್ನು ಇಲ್ಲಿಗೆ ಆಹ್ವಾನಿಸುತ್ತೇವೆ. 75 ವರ್ಷದ ಸ್ವಾತಂತ್ರ್ಯ ಸಂಭ್ರಮ ಹಾಗೂ ಸ್ವಾತಂತ್ರ್ಯ ತರುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಹಿನ್ನೆಲೆಯಲ್ಲಿ ಇದು ಮಹತ್ವದ ಸದಸ್ಯತ್ವ ನೋಂದಣಿಯಾಗಲಿದೆ ಎಂದರು.

ಜನ ಜಾಗೃತಿ:

ಈ ದೇಶ ಆರ್ಥಿಕ ಬಿಕ್ಕಟ್ಟು, ಜನರ ನೋವು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳ ಹಿನ್ನೆಲೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಪ್ರತಿ ಕ್ಷೇತ್ರ, ಪಂಚಾಯ್ತಿ ಹಾಗೂ ಜಿಲ್ಲಾಮಟ್ಟದಲ್ಲಿ ರಾಜ್ಯದ ಎಲ್ಲ ನಾಯಕರು ಪ್ರವಾಸ ಮಾಡಿ ಜಾಗೃತಿ ಮೂಡಿಸಲು ಎಐಸಿಸಿ ನಿರ್ದೇಶನದಂತೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button