ಕಲ್ಲಿದ್ದಲು ಕೊರತೆ ನೀಗಿಸಲು ಕೇಂದ್ರ ಸಚಿವರಿಗೆ ಮನವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಲ್ಲಿದ್ದಲು ಕೊರತೆ ನೀಗಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲಿದ್ದಲ್ಲಿನ ಕೊರತೆ ಇಡೀ ದೇಶವನ್ನು ಬಾಧಿಸುತ್ತಿದೆ. ಕರ್ನಾಟಕದಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಷಿರನ್ನು ಮನವಿ ಮಾಡಲಾಗಿದೆ. ರಾಜ್ಯಕ್ಕೆ ಪ್ರಸ್ತುತ ಸರಬರಾಜಾಗುತ್ತಿರುವ 10 ರೇಕ್ ಕಲ್ಲಿದ್ದಲನ್ನು ಹಚ್ಚಿಸಿ 14 ರೇಕ್ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಡಿಸೆಂಬರ್ ಅಂತ್ಯದೊಳಗೆ ರಾಜ್ಯ ಮೊದಲನೇ ಡೋಸ್ ಶೇ. 90 ಹಾಗೂ ಎರಡನೇ ಡೋಸ್ ಶೇ.70ರಷ್ಟು ಕೊಡುವ ಗುರಿ ಹೊಂದಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಸಚಿವ ಆರ್. ಅಶೋಕ್ ವಿರುದ್ಧ ಹಿರಿಯ ಸಚಿವ ವಿ.ಸೋಮಣ್ಣ ಸೇರಿದಂತೆ ಬಿಜೆಪಿಯ ಕೆಲವು ಶಾಸಕರೂ ತಿರುಗಿಬಿದ್ದಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಂಬಂಧಿಸಿದವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಾರ್ಯನಿರತರಾಗಿದ್ದ ಪರಿಣಾಮ ಈ ಬಾರಿ ದೆಹಲಿ ಭೇಟಿ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಸಂಪುಟ ವಿಸ್ತರಣೆ ಕುರಿತು ಯಾರೊಂದಿಗೂ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.