Latest

ಬೃಹತ್ ಬೆಂಗಳೂರಿನ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅಗತ್ಯ: ಸಿಎಂ ಬೊಮ್ಮಾಯಿ

ಬೆಂಗಳೂರು: ಬೃಹತ್ ಬೆಂಗಳೂರಿನ ಅಭಿವೃದ್ಧಿಯಲ್ಲಿ ಜನರ ಭಗವಹಿಸುವಿಕೆ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ನಗರೋತ್ಥಾನ ಯೋಜನೆಯಡಿ ರಾಜಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಶಿವನಗರ 1 ಮತ್ತು 8ನೇ ಮುಖ್ಯರಸ್ತೆ ಕೂಡು ಸ್ಥಳದಲ್ಲಿ 71.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರಿಂದ ಸಲಹೆ ಸೂಚನೆಗಳನ್ನು ಪಡೆಯಲು ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ಮೊಬೈಲ್‌ನಲ್ಲಿ ಲಭ್ಯವಾಗುವಂತೆ ಮಾಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಶೀಘ್ರವೇ ಎಲ್ಲಾ 28 ಕ್ಷೇತ್ರಗಳಲ್ಲಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಅತಿ ಹೆಚ್ಚು ಜನದಟ್ಟಣೆ ಇರುವ ಶಿವನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನದಟ್ಟನೆ ಕಡಿಮೆ ಮಾಡಲು ಇಂಟಿಗ್ರೇಟೆಡ್ ಮೇಲ್ಸೇತುವೆ ಬಹಳ ಸಹಕಾರಿಯಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಡಾವಣೆಯನ್ನು ಒಟ್ಟುಗೂಡಿಸಿರುವ ಕೆಲಸ ಅಭಿನಂದನೀಯ. ತುಮಕೂರು- ಮೈಸೂರು ಹೆದ್ದಾರಿ ಹೈ ಡೆನ್ಸಿಟಿ ಕಾರಿಡಾರ್ ಆಗಿದ್ದು, ವೆಸ್ಟ್ ಆಫ್ ಕರ್ಡ್ ರೋಡ್ ಬಳಿ ವಾಹನ ದಟ್ಟಣೆ ಜಾಸ್ತಿ ಇರುತ್ತದೆ. ಸೋಪ್ ಫ್ಯಾಕ್ಟರಿ ಯಿಂದ ಮೈಸೂರು ರೋಡ್ ತನಕ ತಡೆರಹಿತ ರಸ್ತೆ ನಿರ್ಮಾಣ ಮಾಡಲು ಬಸವೇಶ್ವರ ನಗರ ಲಿಂಕ್ ಮಾಡುವ ಮಹತ್ವದ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ನೀಡಿದರೆ ಜನಸ್ಪಂದನೆಯುಳ್ಳ ಜನಪರ ಸರ್ಕಾರ ಎನಿಸಿಕೊಳ್ಳುತ್ತದೆ. ನಗರ ಯೋಜನೆಯ ದೃಷ್ಟಿಕೋನ ಬದಲಾವಣೆ ಆಗಿ, ಬೆಂಗಳೂರಿನ ಯೋಜನಾಬದ್ಧ ಸಮಗ್ರ ಅಭಿವೃದ್ಧಿಯಾಗಬೇಕು ಎಂದು ಹೇಳಿದ ಸಿಎಂ, ಬಂಡವಾಳ ಹೂಡಿಕೆ , ಪ್ರವಾಸೋದ್ಯಮ ಮುಂತಾದ ಎಲ್ಲ ಕ್ಷೇತ್ರಗಳಿಗೂ ಬೆಂಗಳೂರನ್ನು ಗುರುತಿಸಲಾಗುತ್ತದೆ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದ ಸೇವೆ ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಯೋಜನಾಬದ್ದ ಹಾಗೂ ಹೊಸ ಚಿಂತನೆಯ ಬೆಂಗಳೂರು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜಕಾಲುವೆ , ಕೆರೆಗಳನ್ನು ನಿರ್ಮಿಸಿರುವುದು, ತಗ್ಗು ಪ್ರದೇಶದಲ್ಲಿ ನೀರು ಹರಿಯದಂತೆ ತಡೆಯುವುದು ಮುಂತಾದ ಕ್ರಮಗಳನ್ನು ಕೈಗೊಂಡು ಬೆಂಗಳೂರನ್ನು ಸುರಕ್ಷಿತ, ಸುಂದರ, ಹಸಿರು ನಗರವನ್ನಾಗಿಸಲು ಸರ್ಕಾರ ಬದ್ಧವಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button