Latest

ಸಾಮೂಹಿಕವಾಗಿ ಎಲ್ಲರೂ ಸೇರಿ ಚುನಾವಣೆ ಮಾಡಿದ್ದೇವೆ, ಸೋಲಿನ ಹೊಣೆ ಕೂಡಾ ನಮ್ಮೆಲ್ಲರದ್ದು: ಸಿಎಂ ಬೊಮ್ಮಾಯಿ

ಧಾರವಾಡ: ಹಾನಗಲ್ ನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಎಲ್ಲರೂ ಸೇರಿ ಚುನಾವಣೆ ಮಾಡಿದ್ದೇವೆ. ಹಾಗಾಗಿ ಹಾನಗಲ್​​ ವಿಧಾನ ಸಭಾ ಉಪ ಚುನಾವಣೆಯ ಸೋಲಿನ ಹೊಣೆ ಕೂಡಾ ನಮ್ಮೆಲ್ಲರದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಹೇಳಿದ್ದೆ, ನಮ್ಮ ನಾಯಕರಾದ ಅಮಿತ್ ಶಾ ನನ್ನ ಹೆಸರು ಹೇಳಿದ್ದರು. ನಾನು ತಂಡದ ಮುಖ್ಯಸ್ಥನಿರಬಹುದು. ಆದರೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿದ್ದೇವೆ ಎಂದರು.

ಶ್ರೀನಿವಾಸ್ ಮಾನೆಯವರ ಕೋವಿಡ್ ಸಹಾಯ ಅವರ ಕೈ ಹಿಡಿದಿದೆ:

ಹಾನಗಲ್ ನಲ್ಲಿ ಒಗ್ಗಟ್ಟಿನ ಕೊರತೆ ಏನಿಲ್ಲ.‌ ಆದರೆ ಆ ಕ್ಷೇತ್ರ ಪೈಪೋಟಿಯಿಂದ ಕೂಡಿದೆ. ಈ ಹಿಂದೆ ಸಿ.ಎಮ್.ಉದಾಸಿ ಗೆಲುವು ಸಾಧಿಸಿದರೇ, ಮತ್ತೊಮ್ಮೆ ಬೇರೆಯವರು ಗೆಲ್ಲುತ್ತಿದ್ದರು. ಅದರಂತೆ ಈ ಬಾರಿ ಉದಾಸಿ ಅವರ ಬೆಂಬಲದ ಮತವನ್ನು ಸಂಪೂರ್ಣವಾಗಿ ಬಿಜೆಪಿ ತೆಗೆದುಕೊಳ್ಳಲು ಆಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕೋವಿಡ್ ಸಮಯದಲ್ಲಿ ಬಹಳ ಕೆಲಸ ಮಾಡಿದ್ದರು. ಹೀಗಾಗಿ ಅಲ್ಲಿನ ಜನರು ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಇನ್ನು ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ 31 ಸಾವಿರ ಮತಗಳಿಂದ ಗೆದ್ದಿದ್ದಾರೆ. ಅಲ್ಲಿ ಕಾಂಗ್ರೆಸ್ ನ್ನು ಜನರು ಪೂರ್ಣಪ್ರಮಾಣದಲ್ಲಿ ತಿರಸ್ಕಾರ ಮಾಡಿದ್ದಾರೆ. ಅದರಂತೆ ಉಪಚುನಾವಣೆ ಮುಂಬರುವ ಸಾರ್ವಜನಿಕ ಚುನಾವಣೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಯಾಗಿಲ್ಲ:

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ದಿನಾಂಕ ನಿಗಧಿಗೆ ವಿಪ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ನ. 8 ರಂದು ಸಚಿವ ಸಂಪುಟ ಸಭೆಯಿದೆ. ಆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈಗಾಗಲೇ ಬೆಳಗಾವಿಯಲ್ಲಿಯೇ ಅಧಿವೇಶನ ಮಾಡೋದು ತೀರ್ಮಾನ ಆಗಿದೆ. ದಿನಾಂಕ ಅಷ್ಟೇ ನಿಗದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Related Articles

Leave a Reply

Your email address will not be published.

Back to top button