Latest

ಜಿಎಂಐಟಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಹಸ್ಯ ಸಭೆ: ಚುನಾವಣೆ ಕಾರ್ಯತಂತ್ರದ ಕುರಿತ ಸುದೀರ್ಘ ಚರ್ಚೆ…!

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರದ್ದು ಅಧಿಕೃತ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ಆದರೂ ದಾವಣಗೆರೆಯ ಜಿಎಂಐಟಿಗೆ ಸಂಪುಟದ ಸಹೊದ್ಯೋಗಿಗಳ ಜೊತೆ ಆಗಮಿಸಿದ ಬಸವರಾಜ್ ಬೊಮ್ಮಾಯಿ ಅವರು ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆಯ ಬಗ್ಗೆ ರಾತ್ರಿಯಿಡೀ ಚರ್ಚೆ ನಡೆಸಿದ್ದಾರೆ. ಮಾತ್ರವಲ್ಲ, ಈ ಚುನಾವಣೆಗಳಲ್ಲಿ ಗೆಲ್ಲಲೇಬೇಕಾದ ಅಗ್ನಿಪರೀಕ್ಷೆ ಸಿಎಂ ಅವರಿಗೆ ಎದುರಾಗಿದೆ.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಚುನಾವಣೆಯನ್ನು ಬಸವರಾಜ್ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಎದುರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲೇಬೇಕಾಗಿದೆ ಬೊಮ್ಮಾಯಿ ಅವರು. ಈಗಾಗಲೇ ದಾವಣಗೆರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು, ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಘೋಷಣೆ ಮಾಡಿದ್ದರು. ಆದ್ರೆ, ಈಗ ಉಪಚುನಾವಣೆಯಲ್ಲಿ ಸೋತರೆ ಬೊಮ್ಮಾಯಿ ಅವರಿಗೆ ಹಿನ್ನೆಡೆ ಉಂಟಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಹೀಗಾಗಿ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬಂದರೆ ಮುಂದಿನ ಹಾದಿ ಎಲ್ಲವೂ ಸುಗಮವಾಗಲಿದೆ. ಇಲ್ಲದಿದ್ದರೆ ಪಕ್ಷದೊಳಗೆ ನಾಯಕತ್ವ ವಿಚಾರ ಮತ್ತೆ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಬೊಮ್ಮಾಯಿ ಅವರು ಎಚ್ಚರಿಕೆ ನಡೆ ಇಡಲಾರಂಭಿಸಿದ್ದು, ಈ ನಿಟ್ಟಿನಲ್ಲಿ ಗೆಲುವಿಗೆ ರಣತಂತ್ರ ರೂಪಿಸಲು ಇಲ್ಲಿಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಈಗ ಉಪಚುನಾವಣೆ ಕಾವು ಜೋರಾಗುತ್ತಿದೆ. ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇದಕ್ಕಾಗಿ ತಂತ್ರಗಾರಿಕೆ ರೂಪಿಸುತ್ತಿದೆ. ಮಾತ್ರವಲ್ಲ, ಈ ಎರಡೂ ಉಪಚುನಾವಣೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪಾಲಿಗೆ ಅಗ್ನಿಪರೀಕ್ಷೆ. ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಮಹತ್ವದ ಚುನಾವಣೆ ಇದು. ಹಾಗಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಅವರ ಹೆಗಲೇರಿದೆ.

ಬೊಮ್ಮಾಯಿ ಅವರಿಗೆ ಪ್ರತಿಷ್ಠೆಯ ಜೊತೆಗೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿಯೇ ಈ ಚುನಾವಣೆ ಎದುರಿಸುತ್ತೇವೆ ಎಂದು ಈಗಾಗಲೇ ರಾಜ್ಯ ಬಿಜೆಪಿ ನಾಯಕರು, ಸಚಿವರು ಹಾಗೂ ಶಾಸಕರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ.

ಸೋಮವಾರ ರಾತ್ರಿ ದಾವಣಗೆರೆಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿ ಅವರು ಸೀದಾ ಜಿಎಂಐಟಿ ಗೆಸ್ಟ್ ಹೌಸ್ ಗೆ ಬಂದರು. ಅವರ ಜೊತೆಗೆ ಸಚಿವರಾದ ಬಿ. ಸಿ. ಪಾಟೀಲ್, ಬಿ. ಶ್ರೀರಾಮುಲು, ಸುನೀಲ್ ಕುಮಾರ್, ಮುನಿರತ್ನ ಸೇರಿದಂತೆ ಇತರ ನಾಯಕರು ಆಗಮಿಸಿದರು. ಈ ವೇಳೆ ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗೆ ಯಾವೆಲ್ಲಾ ಮಾನದಂಡ ಅನುಸರಿಸಬೇಕು. ಸಿ. ಎಂ. ಉದಾಸಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಈ ಬಾರಿ ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿಲ್ಲ. ಇದರಿಂದ ಸಹಜವಾಗಿಯೇ ಶಿವಕುಮಾರ್ ಉದಾಸಿ ಮತ್ತು ಅವರ ಕುಟುಂಬದವರಿಗೆ ಬೇಸರ ತರಿಸಿದೆ. ಇದನ್ನು ಯಾವ ರೀತಿ ಶಮನ ಮಾಡಬೇಕು, ಅವರನ್ನೆಲ್ಲಾ ಒಟ್ಟಾಗಿ ಸೇರಿಸಿಕೊಂಡು ಅಭ್ಯರ್ಥಿ ಗೆಲುವಿಗೆ ಏನೆಲ್ಲಾ ಕಾರ್ಯತಂತ್ರ ರೂಪಿಸಬೇಕೆಂಬ ಬಗ್ಗೆ ಸಚಿವರ ಜೊತೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಯಿತು.

ಬಿಜೆಪಿ ಮೂಲಗಳ ಪ್ರಕಾರ ಬೆಳಗಿನ ಜಾವ ಮೂರು ಗಂಟೆಯವರೆಗೆ ನಾಯಕರು ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಕೆಲವು ಮಹತ್ವದ ವಿಚಾರಗಳ ಬಗ್ಗೆಯೂ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರು ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು ಎನ್ನಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಚಿವರಾದ ಬಿ. ಸಿ. ಪಾಟೀಲ್, ಸುನೀಲ್ ಕುಮಾರ್ ಹಾಗೂ ರಾಮುಲು, ಸಂಸದ ಸಿದ್ದೇಶ್ವರ್ ಜೊತೆ ರಾತ್ರಿಯೆಲ್ಲಾ ಚರ್ಚೆ ಮಾಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಸಿಂಧಗಿಯಲ್ಲಿ ಗೆಲುವು ಅಷ್ಟು ಸುಲಭವಲ್ಲ. ಮನಗೂಳಿ ಪುತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣ ಎಲ್ಲಿ ಹೇಗೆ ಎದುರಿಸಬೇಕು? ಯಾವೆಲ್ಲಾ ರಣತಂತ್ರ ರೂಪಿಸಬೇಕು? ಬಿಜೆಪಿ ಗೆಲುವಿಗೆ ಯಾರೆಲ್ಲಾ ಪ್ರಚಾರಕ್ಕೆ ಹೋಗಬೇಕು? ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಆಂತರಿಕ ಕಲಹಕ್ಕೆ ಎಡೆಮಾಡಿಕೊಡದೇ ಎಲ್ಲಾ ಸಮುದಾಯದವರನ್ನು ಸೆಳೆಯುವ ಕೆಲಸ ಆಗಬೇಕು. ಇದಕ್ಕೆಲ್ಲಾ ಈಗಿನಿಂದಲೇ ತಯಾರಿ ಆರಂಭಿಸೋಣ. ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯದ ಜನರು ಬಿಜೆಪಿಯನ್ನು ಕೈ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು ಎಂದು ಬಿಜೆಪಿಯ ಉನ್ನ,ತ ಮೂಲಗಳು ತಿಳಿಸಿವೆ.

ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಿವಕುಮಾರ್ ಉದಾಸಿ ಅವರು ತಮ್ಮ ಕುಟುಂಬಕ್ಕೆ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದರು. ಆದ್ರೆ, ಅವರ ಕುಟುಂಬಕ್ಕೆ ಟಿಕೆಟ್ ಸಿಕ್ಕಿಲ್ಲ ಎಂಬ ವಿಚಾರ ಹಿನ್ನೆಡೆಗೆ ಕಾರಣವಾಗಬಾರದು. ಯಾಕೆಂದರೆ ಈ ಎರಡೂ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಬಿ ರುಸಿನ ಪ್ರಚಾರದ ಜೊತೆಗೆ ಬಿಜೆಪಿ ವಿರುದ್ಧ ಮುಗಿಬೀಳುತ್ತಿದ್ದಾರೆ. ಇದಕ್ಕೆ ಸರಿಯಾದ ಠಕ್ಕರ್ ಕೊಡಬೇಕಿದೆ.

ಆರ್ ಎಸ್ ಎಸ್ ಬಗ್ಗೆ ಟೀಕಾಪ್ರಹಾರ ನಡೆಸುತ್ತಿರುವ ಸಿದ್ದರಾಮಯ್ಯರಿಗೆ ಅವರ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಸರಿಯಾದ ಉತ್ತರ ಕೊಡೋಣ. ನಾವು ಗೆಲ್ಲುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿ ಎಂಬಂತೆ ಬಿಂಬಿಸಲು ಅನುಕೂಲವಾಗುತ್ತದೆ. ಒಂದು ವೇಳೆ ಸೋತರೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಆಗುವುದು ಖಚಿತ. ಈ ಕಾರಣಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪ್ರತಿಪಕ್ಷಗಳನ್ನು ಹಣಿಯುವ ತಂತ್ರಗಾರಿಕೆಯ ಬಗ್ಗೆಯೂ ಲೆಕ್ಕಾಚಾರ ಹಾಕಲಾಗಿದೆ. ಒಟ್ಟಾರೆ ದಾವಣಗೆರೆಯಲ್ಲಿ ಸಿಎಂ ಕಾರ್ಯಕ್ರಮ ಅಧಿಕೃತವಾಗಿ ಇರದಿದ್ದರೂ ಜಿಎಂಐಟಿಯಲ್ಲಿ ರಾತ್ರಿ ಪೂರ್ತಿ ರಾಜಕೀಯ ಬಿಸಿಬಿಸಿ ಚರ್ಚೆಯಾಗಿರುವುದು ನಿಜ.

Related Articles

Leave a Reply

Your email address will not be published.

Back to top button