ಖಾದಿ ಮತ್ತು ಗ್ರಾಮೋದ್ಯಮ ಉತ್ಪನ್ನ ಖರೀದಿಸಿದ ಸಿಎಂ ಮತ್ತು ಸಚಿವರು
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೂಡಿ ಸಚಿವರಾದ ಎಂ.ಟಿ.ಬಿ ನಾಗರಾಜು , ಗೋವಿಂದ ಕಾರಜೋಳ, ಸುನೀಲ್ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಬೆಂಗಳೂರಿನ ಗಾಂಧಿಭವನದ ಬಳಿ ಇರುವ ಖಾದಿ ಎಂಪೋರಿಯಂನಲ್ಲಿ ಖಾದಿ ಹಾಗೂ ಗ್ರಾಮೋದ್ಯಮಗಳ ಉತ್ಪನ್ನ ಗಳನ್ನು ಖರೀದಿಸಿದರು.
ಸಂಕಷ್ಟದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘ-ಸಂಸ್ಥೆಗಳಿಗೆ ಆರ್ಥಿಕ ಬಲ ನೀಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ನಾಗರಾಜು ಸ್ವತಃ ತಾವೇ ಅದಕ್ಕೆ ಮೇಲ್ಪಂಕ್ತಿ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರುಗಳನ್ನು ಕರೆದೊಯ್ದು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸಿದರು.
ಈ ಮಳಿಗೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ, ಅವರು (ಅಂದಿನ ಹಣಕಾಸು ಸಚಿವರು) 15.11.1984ರಲ್ಲಿ ಉದ್ಘಾಟಿಸಿದ್ದರು.
ಸಿಎಂ ಮತ್ತು ಸಚಿವರ ಭರ್ಜರಿ ಖರೀದಿಯಿಂದ ಪ್ರೇರಣೆಗೊಂಡಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ,ಖಾದಿ ಮತ್ತು ಗ್ರಾಮೋದ್ಯಮದ ಉತ್ಪನ್ನಗಳ ಖರೀದಿಗೆ ಮುಗಿಬಿದ್ದರು.ಖರೀದಿಯ ಭರಾಟೆ ಭರ್ಜರಿಯಾಗಿ ನಡೆಯಿತು.
ನೋಂದಣಿಯಾದ ಖಾದಿ ಭಂಡಾರಗಳಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿ ವಸ್ತ್ರಗಳ ಮೇಲೆ ಗರಿಷ್ಠ ಶೇಕಡ 35 ರಷ್ಟು ಮತ್ತು ರೇಷ್ಮೆ ಖಾದಿಯ ಮೇಲೆ ಶೇಕಡ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ರಾಜ್ಯದಲ್ಲಿ 166 ಖಾದಿ ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, 20 ಸಾವಿರಕ್ಕೂ ಅಧಿಕ ನೂಲುವವರು, ನೇಕಾರರು, ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಶೇಕಡ 60ಕ್ಕೂ ಹೆಚ್ಚು ಮಹಿಳೆಯರು ಎಂಬುದು ಗಮನಾರ್ಹ ಅಂಶ.