ಮಾರಕ ಕೃಷಿ ಕಾಯ್ದೆಗಳಿಂದ ರೈತರು ದಿವಾಳಿಯಾಗಲಿದ್ದಾರೆ: ನ್ಯಾ. ಹೆಚ್ ಎನ್ ನಾಗಮೋಹನ್
ಚಿಕ್ಕಮಗಳೂರು: ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ಸರ್ಕಾರ ರೈತರು, ತಜ್ಞರೊಂದಿಗೆ ಚರ್ಚಿಸಿ ಮರುಪರಿಶೀಲನೆ ನಡೆಸಬೇಕೆಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಒತ್ತಾಯಿಸಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಜನಸಂಸ್ಕೃತಿ ವೇದಿಕೆ ಹಾಗೂ ವಿವಿಧ ಪಕ್ಷ ಸಂಘಟನೆಗಳ ಸಹಯೋಗದಲ್ಲಿ ರೈತರನ್ನು ರಕ್ಷಿಸಿ-ಸಂವಿಧಾನ ಉಳಿಸಿ ವಿಷಯದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕಾಯ್ದೆಗಳ ಕುರಿತು ಸುಪ್ರೀಂ ಕೋರ್ಟ್ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕು. ಶಾಂತಿಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು. ಮಿಣುಕು ಹುಳುಗಳಂತೆ ಪ್ರತಿಯೊಬ್ಬರೂ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಕಿವಿಮಾತು ಹೇಳಿದರು.
ಕೃಷಿ ತಿದ್ದುಪಡಿ ಕಾಯ್ದೆ ಖಂಡಿಸಿ ರೈತರು ನಿರಂತರ ಚಳವಳಿ ನಡೆಸುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳನ್ನು ಕೇವಲ ಕಿವಿಯಿಂದ ಕೇಳದೆ ಹೃದಯದಿಂದ ಆಲಿಸಿ ಸ್ಪಂದಿಸಬೇಕು. ಜನರ ಸಮಸ್ಯೆಗಳಿಗೆ ಜನರ ಚಳುವಳಿಯೇ ಮದ್ದು ಎಂದರು.
ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಸರ್ಕಾರ ಮೀಸಲಾತಿ ನೀಡುವುದು ಪರಿಹಾರವಲ್ಲ. ಮೀಸಲಾತಿ ಭ್ರಮೆಯಲ್ಲಿ ಇಂದಿನ ರಾಜಕಾರಣ ನಡೆಯುತ್ತಿದೆ. ಆಹಾರ ಉತ್ಪಾದನೆ ಹೆಚ್ಚಳದೊಂದಿಗೆ ರಸಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಭೂಮಿ ಬರಡಾಗಿದೆ. ವೈಜ್ಞಾನಿಕ ಬೆಲೆ ಸಿಗದೆ ರೈತ ಕೃಷಿ ಬಿಕ್ಕಟ್ಟಿನಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮೂಲಕ ಯಾರು ಬೇಕಾದರೂ ರಷ್ಟು ಭೂಮಿಯನ್ನೂ ಕೊಂಡುಕೊಳ್ಳಬಹುದು. ಇದರಿಂದ ರಿಯಲ್ ಎಸ್ಟೇಟ್, ರೆಸಾರ್ಟ್ ಗಳು ಆರಂಭವಾಗಿ ಸಣ್ಣ ಹಿಡುವಳಿ ರೈತರು ಭೂಮಿಯನ್ನು ಕಳೆದುಕೊಳ್ಳುವ ಮೂಲಕ ದಿವಾಳಿಯಾಗುವ ಸನ್ನಿವೇಶ ಎದುರಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.
ಬಿ ಎಲ್ ಶಂಕರ್, ಎಚ್ ಎಚ್ ದೇವರಾಜ್, ಡಾ.ಅಂಶುಮಂತ್, ಎಂಎಲ್.ಮೂರ್ತಿ, ಗಾಯತ್ರಿ ಶಾಂತೇಗೌಡ, ಎ ಎನ್.ಮಹೇಶ್, ವಿಜಯಕುಮಾರ್, ಕೆ ಟಿ ರಾಧಾಕೃಷ್ಣ,ಸುಂದರಗೌಡ, ಗುರುಶಾಂತಪ್ಪ, ಪುಟ್ಟಸ್ವಾಮಿ, ತೇಗೂರು ಜಗದೀಶ್, ಪಿ ಸಿ ರಾಜೇಗೌಡ, ಡಾ.ಡಿಎಲ್ ವಿಜಯಕುಮಾರ್, ರವೀಶ್ ಕ್ಯಾತನಬೀಡು, ಬಿ ಅಮ್ಜದ್, ರೇಣುಕಾರಾಧ್ಯ ಇದ್ದರು.