Latest

ಬಿಪಿಎಲ್ ಕುಟುಂಬಗಳ ಆದಾಯ ಮಿತಿ ಗೊಂದಲದಿಂದ ಮನೆ ಮಂಜೂರಾತಿಗೆ ಅಡ್ಡಿ; ಕೂಡಲೇ ಸರಿಪಡಿಸುವಂತೆ ಆಗ್ರಹ

ಚಿಕ್ಕಮಗಳೂರು: ಸರ್ಕಾರ ಬಿಪಿಎಲ್ ಕುಟುಂಬಗಳ ಆದಾಯ ಮಿತಿಯನ್ನು ಕಡಿತಗೊಳಿಸಿರುವುದಲ್ಲದೆ, ವಿವಿಧ ಇಲಾಖೆಗಳಲ್ಲಿ ಗೊಂದಲದ ನಿಯಮಗಳಿಂದ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ ಕೆ ಮಂಜುನಾಥ್ ಆರೋಪಿಸಿದ್ದಾರೆ.

ಬಿಪಿಎಲ್ ಕುಟುಂಬಗಳಿಗೆ ಎರಡೂವರೆ ಲಕ್ಷ ತನಕ ಆದಾಯ ದೃಢೀಕರಣ ಪತ್ರ ನೀಡಲಾಗುತ್ತಿದೆ. ಆದರೆ ಗ್ರಾಮ ಪಂಚಾಯಿತಿಯಲ್ಲಿ ಮನೆ ಮಂಜೂರು ಆದವರಿಗೆ ರೂ.35 ಸಾವಿರ(ಮೂವತೈದು ಸಾವಿರ) ಒಳಗೆ ಆದಾಯ ಇದ್ದವರಿಗೆ ಮನೆ ಮಂಜೂರು ಮಾಡಬೇಕಾದ ಆದೇಶವಿದೆ. ಹೀಗಿರುವಾಗ ಕಂದಾಯ ಇಲಾಖೆಯಲ್ಲಿ ಬಿಪಿಎಲ್ ಕುಟುಂಬಕ್ಕೆ ರೂ.45 ಸಾವಿರ (ನಲವತೈದು ಸಾವಿರ)ಕ್ಕೂ ಹೆಚ್ಚಿನ ಆದಾಯ ನಮೂದಿಸಿ ಪ್ರಮಾಣ ಪತ್ರ ಕೊಡಲಾಗುತ್ತಿದೆ ಎಂದು ದೂರಿದ್ದಾರೆ.

ಸರ್ಕಾರದ ಇಂತಹ ಗೊಂದಲದ ಆದೇಶಗಳಿಂದಾಗಿ ಪಂಚಾಯಿತಿಯಲ್ಲಿ ಬಿಪಿಎಲ್ ಕುಟುಂಬಕ್ಕೆ ಮನೆ ಮಂಜೂರಾತಿಗೆ ಆದಾಯ ದೃಡೀಕರಣ ಪತ್ರದ ಸಮಸ್ಯೆಯಿಂದ ಅಡ್ಡಿಯಾಗುತ್ತಿದೆ. ಇದರಿಂದ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹ ಕುಟುಂಬಗಳು ವಂಚನೆಗೊಳಗಾಗುತ್ತಿವೆ. ಸರ್ಕಾರ ಈ ಗೊಂದಲದ ಆದೇಶದಿಂದ ಸಮಸ್ಯೆ ಉದ್ಭವಿಸಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೊದಲೇ ಕೋವಿಡ್ ನಿಂದ ಜನ ತತ್ತರ ಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರಿಗೆ ಹೆಚ್ಚು ನೆರವಾಗುವಂತೆ ಯೋಜನೆಗಳನ್ನು ಮಾರ್ಪಡಿಸುವ ಬದಲು ಬಡವರ್ಗದವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button