Latest

ಉಪ ಚುನಾವಣೆಯಲ್ಲಿ ಕಂಬಳಿ ಬಗ್ಗೆ ಲಘುವಾಗಿ ಚರ್ಚೆ ನಡೆಯುತ್ತಿದೆ: ಹೆಚ್. ವಿಶ್ವನಾಥ್ ಬೇಸರ

ಮೈಸೂರು: ಉಪಚುನಾವಣೆಗಳಲ್ಲಿ ಏಕವಚನದ ಬಳಕೆ ಹೆಚ್ಚಾಗಿದೆ. ಕುರುಬ ಸಮುದಾಯ, ಕಂಬಳಿ ಬಗ್ಗೆ ಲಘುವಾದ ಚರ್ಚೆ ನಡೆಯುತ್ತಿದೆ. ಯಾರೇ ಬಂದರೂ ಕಂಬಳಿ ಹೊದಿಸಿ ಸನ್ಮಾನ ಮಾಡೋದು ಸಂಪ್ರದಾಯ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಕಂಬಳಿ ಹೊದಿಸಿ ಸನ್ಮಾನ ಮಾಡಲಾಗಿದೆ. ಅದನ್ನೇ ಸಿದ್ದರಾಮಯ್ಯ ಅನಗತ್ಯವಾಗಿ ಹಾದಿರಂಪ ಬೀದಿರಂಪ ಮಾಡುತ್ತಿದ್ದಾರೆ ಎಂದು ಎಂಎಲ್​​ಸಿ ಹೆಚ್. ವಿಶ್ವನಾಥ್ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುರಿ, ಕಂಬಳಿ ಸಮುದಾಯದ ಸೊತ್ತು. ಯಾವುದೇ ಜಾತಿಯ ಸ್ವತ್ತಲ್ಲ. ಇದು ಸಿದ್ದರಾಮಯ್ಯರ ಸಣ್ಣತನವನ್ನು ತೋರಿಸಿದೆ. ಇವರು ಸಹ ಮುಖ್ಯಮಂತ್ರಿಯಾಗಿದ್ದವರು. ನೀವು ಸಮಾಜದ ಗೌರವವನ್ನು ಕಳೆಯುತ್ತಿದ್ದೀರಿ. ಬಸವರಾಜ ಬೊಮ್ಮಾಯಿಯವರು ಕಂಬಳಿ ಹೊದ್ದುಕೊಂಡಾಗ ಅದರ ಗೌರವವನ್ನು ಹೆಚ್ಚಿಸುತ್ತೇನೆ. ಕುರುಬ ಸಮುದಾಯದ ಹಿತ ಕಾಯುತ್ತೇನೆಂದು ಭರವಸೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಏಕವಚನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿಯನ್ನು ನಿಂದಿಸುತ್ತಿರುವುದು ಸರಿಯಲ್ಲ ಎಂದರು. ಸಿದ್ದರಾಮಯ್ಯರ ಈ ವರ್ತನೆಯನ್ನು ಕುರುಬ ಸಮುದಾಯ ಗಮನಿಸಿದೆ‌. ಸಿದ್ದರಾಮಯ್ಯ ವರ್ತನೆಯನ್ನು ಕುರುಬ ಸಮುದಾಯ ಒಪ್ಪುವುದಿಲ್ಲ‌ ಎಂದು ಕಿಡಿಕಾರಿದರು.

ಏಕವಚನದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಸಂಭೋದಿಸೋದು ಎಷ್ಟು ಸರಿ.? ನಾನು ಮಾತನಾಡೋದೇ ಹೀಗೆ ಅಂತೀರಿ.  ಹಾಗಾದ್ರೆ ಏನಮ್ಮ ಅನ್ನಿ ನಿಮ್ಮ ಅದಿನಾಯಕಿಗೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ  ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಸವಾಲ್ ಹಾಕಿದರು.

ನೀವು ಸಂಕುಚಿತವಾದಂತೆ ಕುರುಬರು ಐಸೋಲೇಟ್ ಆಗಿ ಬಿಡ್ತಾರೆ. ಕುರುಬರು ಏಕಾಂಗಿಯಾಗುವ ಅಪಾಯವಿದೆ.  ಇದನ್ನು ನೀವು ಗಮನದಲ್ಲಿ ಇಟ್ಟುಕೊಂಡು ಮಾತನಾಡಿ ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.

ಸಿದ್ದರಾಮಯ್ಯ ಕೃತಜ್ಞತೆ ಎಂಬುದೇ ಇಲ್ಲ:

ಈ ನಾಡಿನಲ್ಲಿ ಕೃತಜ್ಞತೆ ಇಲ್ಲದ ನಾಯಕ ಅಂದ್ರೆ ಸಿದ್ದರಾಮಯ್ಯ. ಹೆಚ್‌ಡಿ.ದೇವೇಗೌಡ ಅವರು ನಿಮ್ಮನ್ನು ಆಚೆಗೆ ಹಾಕಿದಾಗ ನಿಮ್ಮ ಕೈ ಹಿಡಿದವನು ನಾನು. ನಂತರ ಎಸ್‌.ಎಂ.ಕೃಷ್ಣ, ಹೆಚ್‌.ಎಂ.ರೇವಣ್ಣ, ಮಲ್ಲಿಕಾರ್ಜುನ ಖರ್ಗೆ. ಕಾಂಗ್ರೆಸ್ ಗೆ ಕರೆ ತಂದು ಬಳಿಕ ವಿರೋಧ ಪಕ್ಷದ ನಾಯಕ ಆದ್ರಿ, ನಂತ್ರ ಮುಖ್ಯಮಂತ್ರಿ ಆದ್ರಿ. ಸಿದ್ದರಾಮಯ್ಯ ಒಂತರ ಇಂಗ್ಲಿಷ್ ನವರ ರೀತಿ. ನಿಮ್ಮನ್ನ ಒಳಗೆ ಕರೆತಂದರೆ, ನೀವು ನಮ್ಮನ್ನು ಹೊರ ಹಾಕಿದ್ರಿ. ಶ್ರೀನಿವಾಸ್ ಪ್ರಸಾದ್ ಮನೆಗೆ ಹೋಗುವಾಗ ನಾನು ನಿಮಗೆ ಗನ್‌ ಮ್ಯಾನ್ ಆಗಿದ್ದೆ. ಆದರೆ ನೀವು ಯಾರನ್ನೂ ಬಿಡಲಿಲ್ಲ, ಹೊರ ಹಾಕಿದ್ರಿ. ಎಸ್‌.ಎಂ.ಕೃಷ್ಣ ನಿಮ್ಮನ್ನ ಅನ್ ಪಾಲಿಷ್ಡ್ ಡೈಮಂಡ್ ಅಂದ್ರು. ಆದ್ರೆ ನೀವು ಅವರನ್ನೂ ಏಕವಚನದಲ್ಲಿ ಮಾತನಾಡಿದ್ರಿ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ ಕೃತಜ್ಞತೆ ಎಂಬುದೇ ಗೊತ್ತಿಲ್ಲ. ಅಹಿಂದ ಎಂದು ಹೇಳುವ ಅಹಿಂದ ನಾಯಕನಾದ ನನ್ನ ಸ್ಥಿತಿ ಏನ್ಮಾಡಿದ್ರೀ.? ಚಿಮ್ಮನಕಟ್ಟಿ ಸ್ಥಿತಿ ಏನ್ಮಾಡಿದ್ರೀ.? ಎ.ಕೃಷ್ಣಪ್ಪ ಸೇರಿದಂತೆ ಅಲ್ಪ ಸಂಖ್ಯಾತ ನಾಯಕರನ್ನು ಹೇಗೆ ಮುಗಿಸಿದ್ರೀ ಸಿದ್ದರಾಮಯ್ಯ ಎಂದು ಎಚ್ ವಿಶ್ವನಾಥ್  ಪ್ರಶ್ನಿಸಿದರು.

ನಾನೇ‌ ನಾನೇ ಅಂತ ಹೇಳ್ತಿರಾ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತದಲ್ಲಿ ಸೋತಿರಿ. ಸೆಕೆಂಡ್ ಲೈನ್ ನಾಯಕರನ್ನ ಬೆಳೆಸಲಿಲ್ಲ. ನಾನು‌ ನಾನು ಅಂತ ಮಾತಾಡ್ತಾರೆ. ನೀನು ಯಾವ ಸೀಮೆ ಅಹಿಂದ. ನನ್ನನ್ನೆ ಬಲಿಯಾಕ್ದೆ, ಚಿಮ್ಮನಕಟ್ಟಿ ಸೀಟ್ ಕಿತ್ಕೊಂಡ್ರಿ. ಅಲ್ಪಸಂಖ್ಯಾತರನ್ನ ಮುಗಿಸುತ್ತಿದ್ದಿರಿ. ನಿಮ್ಮದು ಯಾವ ಅಹಿಂದ. ಅಹಿಂದವನ್ನ ಮುಗಿಸುತ್ತ ಬಂದ್ರಿ. ನಿಮ್ಮ ಮಾತು ಸಮಾಜವನ್ನ ಸಡಿಲಮಾಡುತ್ತಿದೆ ಎಂದರು.

ನಾನೇ ಕಟ್ಟುಬಿಟ್ಟೆ ಮಠ ಅಂತೀರಾ. ಕನಕ ಪೀಠದ ಸ್ಥಾಪಕ ಅಧ್ಯಕ್ಷ ನಾನು. ಕುರುಬರು ದಡ್ರು ಮಠಕಟ್ಟಿ ಸ್ವಾಮೀಜಿ ಪಾದ ಹಿಡಿಸ್ತಿಯಾ ಅಂತ ಹೇಳಿದ್ರು. ಕಾಗಿನೆಲೆಯಲ್ಲಿ 10 ಸಾವಿರ ಮನೆ ಇದೆ. ಇದರಲ್ಲಿ ಒಂಬತ್ತೂವರೆ ಸಾವಿರ ಮುಸ್ಲಿಂ ಸಮುದಾಯ ಇದೆ‌. ಮಠ ಕಟ್ಟಿದೆ ಅಂತೀರಾ ಕಾಗಿನೆಲೆ ಊರಿನ ಒಳಗೆ ಹೋಗಿಲ್ಲ. ಕನಕ‌ಗೋಪುರ ಕೆಡವಿದಾಗ ಎಲ್ಲಿದ್ರಿ. ಕುರುಬ ಸಮುದಾಯಕ್ಕೆ ನಿಮ್ನ ಕೊಡುಗೆ ಏನು.? ಕುರುಬ ಎಸ್.ಟಿ. ಹೋರಾಟಕ್ಕೆ ನಿಮ್ಮ ಬೆಂಬಲ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಹಾನಗಲ್-ಸಿಂದಗಿ ಉಪಚುನಾವಣೆ ವಿಚಾರ ಸಂಬಂಧ ಕುರುಬ ಸಮುದಾಯಕ್ಕೆ ಸಂದೇಶ ರವಾನಿಸಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸಮುದಾಯ ಹಾಗೂ ದೇಶದ ಒಳಿತಿಗಾಗಿ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಮತಹಾಕಿ. ಇನ್ನೂ ಒಂದೂವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತೆ. ಕುರುಬ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಬಸವರಾಜ ಬೊಮ್ಮಾಯಿ ಕುರುಬ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.

ಸಮುದಾಯಕ್ಕಾಗಿ ಏನೂ ಮಾಡಿಲ್ಲ. ಕೆಲವೊಂದು ಸಮುದಾಯ ಭವನ, ಕಲ್ಯಾಣ ಮಂಟಪ ಮಾಡಿದ್ದಾರೆ ಅಷ್ಟೇ. ಸಮುದಾಯದ ಆರ್ಥಿಕವಾಗಿ ಮುಂದುವರೆಯೋದಕ್ಕೆ ನಿಮ್ಮ ಕೊಡುಗೆ ಏನು.? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ಸಮುದಾಯದ ಅಭಿವೃದ್ಧಿಗಾಗಿ ಕುರುಬರು ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು. ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದಹಾಗೆ ಆಗುತ್ತೆ‌. ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದಹಾಗೆ ಆಗುತ್ತೆ‌. ಅದಕ್ಕೆ ವೇದಿಕೆಗೆ ಬಂದಾಗೆಲ್ಲಾ ಶಿಳ್ಳೆ, ಚಪ್ಪಾಳೆ ಹೊಡಿತಾರೆ. ಸಿದ್ದರಾಮಯ್ಯ ಸಮುದಾಯನ್ನ ಹೈಜಾಕ್ ಮಾಡ್ಕೊಂಡಿದ್ದಾರೆ ಎಂದು ಮಾತಿನುದ್ದಕ್ಕೂ ಸಿದ್ದರಾಮಯ್ಯರನ್ನ ವಿಶ್ವನಾಥ್ ತರಾಟೆ ತೆಗೆದುಕೊಂಡರು.

Related Articles

Leave a Reply

Your email address will not be published.

Back to top button