ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತಿ ವಿಭಜಕ: ಬಿಜೆಪಿ ಆರೋಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತಿ ವಿಭಜಕ. ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಸರಣಿ ಟ್ವಿಟ್ ಮಾಡಿರುವ ಬಿಜೆಪಿ, ಜಾತಿ ಎಂಬುದು ಈ ದೇಶದಲ್ಲಿ ವಾಸ್ತವ ಎನ್ನುವ ಸಿದ್ದರಾಮಯ್ಯ ಅವರು ಜಾತಿ ರಾಜಕೀಯ ಬಿಟ್ಟು ಬೇರೇನು ಮಾಡಿಲ್ಲ. ನಿಜವಾಗಿಯೂ ಜಾತ್ಯತೀತರಾಗಿದ್ದರೆ ಉಪಚುನಾವಣೆ ಸಂದರ್ಭದಲ್ಲೂ ಜಾತಿವಾರು ಸಭೆ ನಡೆಸುವ ಅಗತ್ಯವಿತ್ತೇ? ಸಿದ್ದರಾಮಯ್ಯನವರೇ, ನಿಮ್ಮಿಂದ ಜಾತಿಯನ್ನು ಉಪಜಾತಿಯಾಗಿ ಒಡೆಯುವುದಕ್ಕೆ ಮಾತ್ರ ಸಾಧ್ಯ ಎಂದು ಕಿಡಿಕಾರಿದೆ.
ಇನ್ನೊಂದು ಟ್ವಿಟ್ ನಲ್ಲಿ ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ. ವೀರಶೈವ, ಲಿಂಗಾಯತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದೆ?
ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆದು ರಾಜಕೀಯ ಲಾಭ ಪಡೆಯುವುದರಲ್ಲಿ ಅವರಿಗಿಂತ ನಿಷ್ಣಾತರು ಬೇರೆ ಇಲ್ಲ. ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲೂ ಜಾತಿ ಹುಡುಕಿದವರು ನೀವಲ್ಲವೇ ಸಿದ್ದರಾಮಯ್ಯ ಎಂದಿದೆ ?