T20 World Cup: ದಕ್ಷಿಣ ಆಫ್ರಿಕಾ ವಿರುದ್ಧ ಕಾಂಗರೂಗಳಿಗೆ 5 ವಿಕೆಟ್ ಜಯ
ಅಬು ಧಾಬಿ: ಟಿ20 ವಿಶ್ವ ಕಪ್ ನಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾವನ್ನು 118 ರನ್ ಗಳಿಗೆ ನಿಯಂತ್ರಿಸಿದ ಆಸ್ಟ್ರೇಲಿಯಾ 19.4 ಓವರ್ ಗಳಲ್ಲಿ ಜಯದ ಗುರಿ ತಲುಪಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಪರ ಸ್ಪಿನ್ ಮತ್ತು ವೇಗದ ಬೌಲರ್ ಗಳು ಉತ್ತಮ ಪ್ರದರ್ಶನ ತೋರಿದರು. ಮಿಚೆಲ್ ಸ್ಟಾರ್ಕ್ (32ಕ್ಕೆ 2), ಜೋಶ್ ಹೆಜಲ್ವುಡ್ (19ಕ್ಕೆ2), ಆಡಂ ಜಾಂಪಾ (21ಕ್ಕೆ2) ದಕ್ಷಿಣ ಆಫ್ರಿಕಾವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಗಳಿಸಿದರು. ದಕ್ಷಿಣ ಆಫ್ರಿಕಾದ ಪರ ಏಡನ್ ಮಾರ್ಕ್ ರಾಮ್ 40 ರನ್ ಗಳಿಸಿ ಸಾಧಾರಣ ಮೊತ್ತಕ್ಕೆ ನೆರವಾದರು.
ಆಸ್ಟ್ರೇಲಿಯಾದ ಜಯದ ಹಾದಿ ಸುಗಮವಾಗಿರಲಿಲ್ಲ. ಪಂದ್ಯ ಕೊನೆಯ ಓವರ್ ವರೆಗೂ ಸಾಗಿ ಬಂತು. ಕೊನೆಯ ಓವರ್ ನಲ್ಲಿ 8 ರನ್ ಗಳಿಸಬೇಕಾಗಿದ್ದ ಆಸೀಸ್ ಪರ ಮಾರ್ಕಸ್ ಸ್ಟೋನಿಸ್ ಇನ್ನೂ 2 ಎಸೆತ ಬಾಕಿ ಇರುವಾಗಲೇ ಜಯ ತಂದಿತ್ತರು. ಜೋಶ್ ಹೆಜಲ್ವುಡ್ ಪಂದ್ಯಶ್ರೇಷ್ಠ ಎನಿಸಿದರು.