Latest
ಬೆಂಗಳೂರಿನಲ್ಲಿ ಮತ್ತೊಂದು ಅವಘಡ; ಕುಸಿದು ಬಿದ್ದ ಅಪಾರ್ಟ್ಮೆಂಟ್ ಸಮುಚ್ಚಯ
ಬೆಂಗಳೂರು: ನಗರದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಕಸ್ತೂರಿನಗರದಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಗುರುವಾರ ಕುಸಿದು ಬಿದ್ದಿದೆ.
2ನೇ ಅಡ್ಡರಸ್ತೆಯಲ್ಲಿರುವ ವಿ.ಜೆ. ಇನ್ಫಿನಿಟಿ ಅಪಾರ್ಟ್ಮೆಂಟ್ ಸಮುಚ್ಚಯ ಕುಸಿದು ಬಿದ್ದಿದೆ. ಮಾಹಿತಿ ಬರುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದ್ದಾರೆ.
‘ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಹಲವು ಫ್ಲ್ಯಾಟ್ಗಳಲ್ಲಿ ಜನರು ವಾಸವಿದ್ದರು. ಹಲವು ದಿನಗಳ ಹಿಂದೆಯೇ ಕಟ್ಟಡ ವಾಲಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು, ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತ ನೀಡಿದ್ದರು. ಕೆಲ ದಿನಗಳ ಹಿಂದಷ್ಟೇ ಮುಂಜಾಗ್ರತಾ ಕ್ರಮವಾಗಿ ನಿವಾಸಿಗಳು ಸ್ಥಳಾಂತರ ಮಾಡಲಾಗಿತ್ತು’ ಎಂದು ಮೂಲಗಳು ಹೇಳಿವೆ.
‘ವಾಲಿದ್ದ ಕಾರಣಕ್ಕೆ ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ಯಾರೂ ವಾಸವಿರಲಿಲ್ಲ. ಗುರುವಾರ ಏಕಾಏಕಿ ಕಟ್ಟಡ ಕುಸಿದು ಬಿದ್ದಿದ್ದು, ಯಾವ ಪ್ರಾಣ ಹಾನಿಯೂ ಸಂಭವಿಸಿಲ್ಲ. ಕಟ್ಟಡಗಳ ಅವಶೇಷ ತೆಗೆಯುವ ಕಾರ್ಯಾಚರಣೆ ಆರಂಭವಾಗಿದೆ’ ಎಂದೂ ಮೂಲಗಳು ತಿಳಿಸಿವೆ