Latest

ಸಂವಿಧಾನ ಅಪಾಯದಲ್ಲಿದೆ, ಹಿಂದುಳಿದವರೆಲ್ಲರು ಸಂಘಟಿತರಾಗಿ ಸಂವಿಧಾನ ರಕ್ಷಣೆಗೆ ಮುಂದಾಗಬೇಕು: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇಂದು ಆಯೋಜಿಸಿದ್ದ ಗಾಣಿಗ ಸಮುದಾಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಸರ್ಕಾರ ಜಾತಿ ಜನಗಣತಿ ವರದಿ ಸ್ವೀಕರಿಸುವಂತೆ ಕಾಣುತ್ತಿಲ್ಲ ಹಾಗಾಗಿ ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ವರದಿ ಸ್ವೀಕರಿಸುತ್ತೇವೆ. ಈಗಿನ ಯಾವ ಸರ್ಕಾರಗಳಿಗೂ ಬದ್ಧತೆಯಿಲ್ಲ ಎಂದರು.

1931 ರಲ್ಲಿ ಕಡೇ ಬಾರಿ ಜಾತಿಗಣತಿ ಆಗಿತ್ತು. ಮೀಸಲಾತಿ ವಿಚಾರ ನ್ಯಾಯಾಲಯದ ಮುಂದೆ ಬಂದಾಗಲೆಲ್ಲ ಜಾತಿ ಜನಸಂಖ್ಯೆಗೆ ಸಂಬಂಧಿಸಿದಂತೆ ನಿಮ್ಮ ಬಳಿಯಿರುವ ಅಧಿಕೃತ ದಾಖಲೆ ಏನು ನ್ಯಾಯಾಲಯ ಪ್ರಶ್ನಿಸುತ್ತಿತ್ತು. ಈ ಕಾರಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶಿಸಿದ್ದೆ. ಯಾವ ಜಾತಿಗೂ ಅನ್ಯಾಯ ಮಾಡುವುದು ಈ ಸಮೀಕ್ಷೆಯ ಉದ್ದೇಶವಲ್ಲ. ಜಾತಿ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದು ಇದರ ಮುಖ್ಯ ಉದ್ದೇಶ. ನಾನು ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ದಗೊಂಡಿರಲಿಲ್ಲ.ಈಗ ವರದಿ ಸಿದ್ಧವಾಗಿದೆ. ಅದನ್ನು ಸ್ವೀಕರಿಸುವ ಬದ್ಧತೆ ಆಡಳಿತರೂಢ ಬಿಜೆಪಿಗಿಲ್ಲ ಎಂದು ತಿಳಿಸಿದರು.

ನಾನು ಕಷ್ಟಪಟ್ಟು ಮೀಸಲಾತಿ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ, ಇಲ್ಲವಾದರೆ ಅಲ್ಲಿಯೇ ಬಿಟ್ಟುಬಿಡಿ, ದಯವಿಟ್ಟು ರಥವನ್ನು ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಮನವಿ ಮಾಡಿದರು.

ಗಾಣಿಗರು ಬಹಳ ಹಿಂದುಳಿದ ಸಮಾಜದವರು. ಈಗ ಆಧುನಿಕ ಯಂತ್ರಗಳು ಬಂದಮೇಲೆ ಈ ಸಮಾಜದ ಉದ್ಯೋಗವನ್ನು ಕಸಿದುಕೊಂಡಿದೆ. ಈ ಸಮಾಜದವರು ಬರೀ ಎಣ್ಣೆ ತೆಗಿಯುವ ಉದ್ಯೋಗಕ್ಕೆ ಜೋತುಬೀಳದೆ ಶಿಕ್ಷಣದ ಕಡೆಗೆ ಹೆಚ್ಚು ಮಹತ್ವ ನೀಡಿ, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಪಡೆಯುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶ್ರಮದ ಸಂಸ್ಕೃತಿಯ ಪ್ರತೀಕವೇ ಗಾಣಿಗ ಸಮುದಾಯ. ನಾವು ಯಾರೂ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಆದರೆ ಜಾತಿಯನ್ನು ನಾವು ಬಿಟ್ಟರೂ, ಅದು ನಮ್ಮನ್ನು ಬಿಡುವುದಿಲ್ಲ. ಗಾಣಿಗರು ಎಂದರೆ ನಾಲ್ಕು ಜನಕ್ಕೆ ಉದ್ಯೋಗ ಕೊಟ್ಟವರು. ನೀವು ಉದ್ಯೋಗಿಗಳಾಗಬೇಡಿ, ಉದ್ಯೋಗ ನೀಡುವವರಾಗಿ. ನಿಮ್ಮಲ್ಲಿ ಆ ಶಕ್ತಿ ಇದೆ. ನಿಮ್ಮ ರಕ್ತದಲ್ಲೇ ಆ ಪರಂಪರೆ ಇದೆ ಎಂದರು.

ಗಾಣಿಗ ಸಮಾಜಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಯಾವುದೇ ಒಂದು ಸರ್ಕಾರಕ್ಕೆ ಗುರಿ ಇರಬೇಕು. ನಿಮ್ಮ ಸಮಸ್ಯೆ ತಿಳಿಸಿದರೆ ಚುನಾವಣೆಗೆ ಹೋದಾಗ ಈ ಸಮಾಜದ ಏಳಿಗೆಗೆ ಪೂರಕವಾಗಿ ನಮ್ಮ ಪ್ರಣಾಳಿಕೆ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

Related Articles

Leave a Reply

Your email address will not be published.

Back to top button