Latest

RTCಯಲ್ಲಿ ಹೆಸರು ದಾಖಲಿಸಲು ಲಂಚ ಕೇಳಿದ ಅಧಿಕಾರಿ : ಲಂಚದ ಹಣಕ್ಕಾಗಿ ಸಾರ್ವಜನಿಕರಿಂದ ಭಿಕ್ಷೆ ಬೇಡಿದ ಯುವಕ !

ಕಾರವಾರ : ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಬಯಸಿದ ಅಧಿಕಾರಿಯ ಮನ ಪರಿವರ್ತನೆ ಮಾಡುವುದಕ್ಕಾಗಿ ಯುವಕನೊಬ್ಬ ಜನರಿಂದ ಭಿಕ್ಷೆ ಬೇಡಿ 136 ರೂಪಾಯಿಯನ್ನು ನೀಡಲು ಮುಂದಾದ ಘಟನೆ ಯಲ್ಲಾಪುರ ನಗರದ ತಹಶೀಲ್ದಾರ್ ಕಛೇರಿಯಲ್ಲಿ ಇಂದು ನಡೆದಿದೆ.

ತಟಗಾರ ಗ್ರಾಮದ ಸರ್ವೆ ನಂ. 12 ರಲ್ಲಿನ ಕ್ಷೇತ್ರವನ್ನು ಉಪ ನೋಂದಣಾಧಿಕಾರಿ ಕಛೇರಿ ಮೂಲಕ ಗಜಾನನ ಭಟ್ಟ ಹಾಗೂ ನಾರಾಯಣ ಭಟ್ಟ ಎಂಬ ಸಹೋದರರಿಬ್ಬರು ವಿಭಾಗ ಮಾಡಿಕೊಂಡಿದ್ದರು. ಇದನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು 2 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.

ಹೀಗಾಗಿ ಗಜಾನನ ಭಟ್ಟ ಅವರ ಪುತ್ರ ಅಚ್ಯುತಕುಮಾರ ಎಂಬಾತನು ಮಂಗಳವಾರ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಅಧಿಕಾರಿಗೆ ಅವರು ಬಯಸಿದ ಹಣ ನೀಡಲು ಮುಂದಾದರು.

ಭ್ರಷ್ಟಾಚಾರದ ಕುರಿತು ಹೋರಾಟ ಮಾಡುವುದಕ್ಕಿಂತ ಮೊದಲು ಅಧಿಕಾರಿಗಳ ಮನ ಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ ಎಂದು ಅಚ್ಯುತಕುಮಾರ ಈ ವೇಳೆ ತಿಳಿಸಿದರು.ಅಚ್ಯುತಕುಮಾರ ಅವರು ಸರ್ಕಾರಿ ಕಛೇರಿಗಳಲ್ಲಿ ಸಿ.ಸಿ.ಟಿವಿ ಕಡ್ಡಾಯ ಮಾಡಬೇಕು ಎಂದು ಮೂರು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು.

ಜಿಲ್ಲಾಡಳಿತ ಆ ವೇಳೆ ಸರ್ಕಾರಿ ಕಛೇರಿಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಎಲ್ಲಾ ಕಛೇರಿಗಳಲ್ಲಿ ಈ ಆದೇಶ ಇನ್ನೂ ಅನುಷ್ಠಾನ ಗೊಂಡಿಲ್ಲ. ಈ ಆದೇಶದನ್ವಯ ಯಲ್ಲಾಪುರ ತಹಶೀಲ್ದಾರ್ ಕಛೇರಿಯ ಎಲ್ಲೆಡೆ ಸಿಸಿಟಿವಿ ಅಳವಡಿಸುವಂತೆ ಅವರು ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರಿಗೆ ಮನವಿ ಮಾಡಿದ್ದಾರೆ.ಇದಲ್ಲದೇ ಭ್ರಷ್ಟಾಚಾರ ಮಾಡುವ ಅಧಿಕಾರಿಗಳಿಗೆ ಈ ಯುವಕ ಭಿಕ್ಷೆಯ ಅಸ್ತ್ರ ಬಳಸಿ ತಿದ್ದುವ ಕೆಲಸ ಮಾಡಿದ್ದು, ಭ್ರಷ್ಟ ಅಧಿಕಾರಿಗಳಿಗೆ ಪಾಠವಾಗಿದೆ.

Related Articles

Leave a Reply

Your email address will not be published.

Back to top button