Latest

ಗಾಯಗೊಂಡ ಕಾಡು ಪ್ರಾಣಿಗಳಿಗೆ ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ಮೈಸೂರು : ಮೈಸೂರಿನ ಮೃಗಾಲಯದಲ್ಲಿ ಗಾಯಗೊಂಡ ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಈಗ ಗಾಯಗೊಂಡ ಕಾಡು ಪ್ರಾಣಿಗಳ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ.

ನಗರದ ಹೊರವಲಯದ ಕೂರ್ಗಳ್ಳಿಯಲ್ಲಿ ಸುಮಾರು 98 ಎಕರೆ ಪ್ರದೇಶದಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ರಾಜ್ಯದಲ್ಲೇ ವಿಶೇಷ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಗಾಯಗೊಂಡ ಹುಲಿ, ಚಿರತೆ, ಆನೆ ಮತ್ತಿತರ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಹೊಂದಿದೆ.

ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕೊಡಗು, ಚಾಮರಾಜನಗರ, ಮಂಡ್ಯ ಜಿಲ್ಲೆ ಸೇರಿ ನಾನಾ ಭಾಗಗಳಲ್ಲಿ ಸೆರೆಸಿಕ್ಕ ಗಾಯಗೊಂಡ ಕಾಡು ಪ್ರಾಣಿಗಳನ್ನು ಈ ಪುನರ್ವಸತಿ ಕೇಂದ್ರದಲ್ಲಿ ಕರೆ ತಂದು ಚಿಕಿತ್ಸೆ ನೀಡಲಾಗುತ್ತದೆ. ಕಳೆದೊಂದು ವರ್ಷದಿಂದ ಈ ಕೇಂದ್ರವನ್ನು ಉನ್ನತೀಕರಿಸಲಾಗಿದೆ.

ಆನೆಗಳಿಗಾಗಿ ನಿರ್ಮಿಸಿರುವ ಈಜು ಕೊಳ ನಿರ್ಮಿಸಲಾಗಿದ್ದು, ಈವರೆಗೆ ಸುಮಾರು 25 ಹುಲಿಗಳು ಹಾಗೂ 30ಕ್ಕೂ ಅಧಿಕ ಸಂಖ್ಯೆಯ ಚಿರತೆಗಳು ಸೇರಿದಂತೆ ಅನೇಕ ಪ್ರಾಣಿಗಳಿಗೆ ಕೇಂದ್ರದಲ್ಲಿರುವ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗಾಯಗೊಂಡ ಪ್ರಾಣಿಗಳ ಪ್ರಾಣ ಉಳಿಸಿದ್ದಾರೆ.

ಪುನರ್ವಸತಿ ಕೇಂದ್ರದಲ್ಲಿ ವಯಸ್ಸಾದ ಆನೆಗಳಿಗಾಗಿಯೇ ಈಜುಕೊಳವನ್ನು ನಿರ್ಮಾಣ ಮಾಡಲಾಗಿದೆ. ಈಜುವುದರಿಂದ ಚಿಕಿತ್ಸೆಯ ಜೊತೆಗೆ ಹಿರಿಯ ಆನೆಗಳಿಗೆ ಸಾಮಾನ್ಯವಾಗಿ ಕಾಡುವ ಸಂದಿವಾತದಂತಹ ರೋಗಗಳಿಗೆ ರಾಮಬಾಣವಾಗಲಿದೆ.

ಪ್ರತಿನಿತ್ಯ ಈಜುವುದರಿಂದ ಅವುಗಳ ಆರೋಗ್ಯ ಸುಧಾರಿಸುತ್ತದೆ ಎಂಬ ಪರಿಕಲ್ಪನೆಯಿಂದ ಇದನ್ನು ನಿರ್ಮಾಣ ಮಾಡಲಾಗಿದೆ. ಹೊರ ರಾಜ್ಯದ ಪ್ರಾಣಿಗಳಿಗೂ‌ ಚಿಕಿತ್ಸೆ ನೀಡಲಾಗುತ್ತದೆ. ಇತ್ತೀಚಿಗೆ ‌ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಧುಮಲೈ ಅರಣ್ಯ ಪ್ರದೇಶದಲ್ಲಿ ಟಿ-23 ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಹುಲಿಗೆ ಈ ಪುನರ್ವಸತಿ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡು ನರಳಾಡುತ್ತಿದ್ದ ಹುಲಿಗೂ ಇಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮೈಸೂರು ಮೃಗಾಲಯವು ಗಾಯಗೊಂಡ ಪ್ರಾಣಿಗಳ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರವನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರೀತಿ ಮಾಡಿದೆ. ಮೃಗಾಲಯದಲ್ಲಿ ಹೆಚ್ಚು ವಿಸ್ತೀರ್ಣವಾದ ಜಾಗ ಇರಲಿಲ್ಲಾ. ಕಾಡಿನಿಂದ ಗಾಯಗೊಂಡು ಬಂದ ಪ್ರಾಣಿಗಳನ್ನ ಮೃಗಾಲಯದ ಪ್ರಾಣಿಗಳ ಜೊತೆ ಸೇರಿದರೆ ಕಾಡು ಪ್ರಾಣಿಯಲ್ಲಿದ್ದ ಸೋಂಕು ಮೃಗಾಲಯದ ಪ್ರಾಣಿಗಳಿಗೆ ತಗುಲಬಹುದು. ಆದ್ದರಿಂದ ಈಗ ಪ್ರತ್ಯೇಕವಾಗಿ ಕಾಡುಪ್ರಾಣಿಗಳ ಆರೈಕೆಗೆ ಆಸ್ಪತ್ರೆ ನಿರ್ಮಿಸಿರುವುದು ಉತ್ತಮ ಕಾರ್ಯವಾಗಿದೆ.

Related Articles

Leave a Reply

Your email address will not be published.

Back to top button