1 ರಿಂದ 5 ನೇ ತರಗತಿಗಳ ಆರಂಭ – ಶೀಘ್ರ ಅಧಿಕೃತ ಆದೇಶ: ಸಿಎಂ ಬಸವರಾಜ ಬೊಮ್ಮಾಯಿ
ಬೆಳಗಾವಿ: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಒಂದರಿಂದ 5ನೇ ತರಗತಿಗಳು ಆರಂಭ ಸಂಬಂಧ ಸರ್ಕಾರ ಶೀಘ್ರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು,ಈ ಸಂಬಂಧ ರಚಿಸಲಾಗಿದ್ದ ತಜ್ಞರ ಸಮಿತಿ ಈಗಾಗಲೇ ತನ್ನ ವರದಿ ನೀಡಿದೆ. ಈ ಸಂಬಂಧ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ. ಆ ಬಳಿಕ ಆದೇಶ ಹೊರಡಿಸಲಾಗುತ್ತದೆ ಎಂದರು.
ಶಾಲೆಯಲ್ಲೇ ಮಕ್ಕಳಿಗೆ ಕೋವಿಡ್ ಲಸಿಕೆ:
ಈ ನಡುವೆ, ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇದೇ 21 ರಿಂದ 1 ರಿಂದ 5ನೆ ತರಗತಿವರೆಗಿನ ಶಾಲೆಗಳು ಆರಂಭಿಸಲು ಉದ್ದೇಶಿಸಿದ್ದು, ಶಾಲೆಯಲ್ಲೇ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ತಜ್ಞರ ಸಲಹೆ ಪಡೆದು ಶಾಲೆ ಆರಂಭಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇಂದು ಸಂಜೆ ವೇಳೆಗೆ ತಾಂತ್ರಿಕ ಸಲಹಾ ಸಮಿತಿ ವರದಿ ಕೈ ಸೇರಲಿದ್ದು, ನಂತರ ಶಾಲೆ ಆರಂಭ ಮಾಡಲಾಗುವುದು ಎಂದು ಅವರು ಹೇಳಿದರು.
ಒಂದೇ ಹಂತದಲ್ಲಿ ರಾಜ್ಯದ ಎಲ್ಲ ಶಾಲೆಗಳನ್ನೂ ತೆರೆಯಲಾಗುವುದು. ಆರಂಭದಲ್ಲಿ ಮಧ್ಯಾಹ್ನದವರೆಗೂ ಮಾತ್ರ ಶಾಲೆ ನಡೆಸಿ ಪರಿಸ್ಥಿತಿ ನೋಡಿಕೊಂಡು ಪೂರ್ಣಾವಧಿ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಕೆಲ ಏಕೋಪಾಧ್ಯಾಯ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ಮೊದಲು ಮಕ್ಕಳ ಸಂಖ್ಯೆ ಹೆಚ್ಚಳ ಮಾಡಲು ಆದ್ಯತೆ ನೀಡಿ ಆನಂತರ ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡಲು ಗಮನ ಹರಿಸುತ್ತೇವೆ ಎಂದೂ ಸಚಿವ ನಾಗೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಲೆ ಆರಂಭಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟ.:
ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಕಡ್ಡಾಯವಾಗಿದೆ. ಶಾಲೆಗೆ ಮಕ್ಕಳ ಹಾಜರಿ ಕಡ್ಡಾಯವಲ್ಲ. ಶಿಕ್ಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕಾಗಿದೆ.