ಇನ್ವೆಸ್ಟಿಗೇಷನ್

ಕನಸಾಗೇ ಉಳಿದ ಹಗಲುಗನಸಿನ‌ ಕೆರೆ ಅಭಿವೃದ್ದಿ

ಪ್ರವಾಸಿಗರ ನೆಚ್ಚಿಣ ತಾಣ ಇಂದು ಅನೈತಿಕ ಚಟುವಟಿಕೆಗಳ ತಾಣ
ಅಳಿವಿನಂಚಿಗೆ ಸೇರುತ್ತಿದೆ ಇತಿಹಾಸ ಪ್ರಸಿದ್ದ ಕೆರೆ

ಕೆ.ಆರ್.ಪುರ: ವಾರಾಂತ್ಯದ ಸಮಯ ಕಳೆಯಲು ಒಂದು ಕಾಲದ ಅಚ್ಚುಮೆಚ್ಚಿನ ತಾಣ , ಇಂದು ಮೂಲಭೂತ ಸೌಕರ್ಯಗಳಿಲ್ಲದೆ ಅವನತಿ ಅಂಚಿನತ್ತ ಸಾಗಿರುವ ಹಗಲು ಕನಸಿನ ಕೆರೆ.

ದಶಕಗಳ ಹಿಂದೆ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತಿದ್ದ “ಹಗಲು ಗನಸಿನ” ಖ್ಯಾತಿಯ ವೆಂಗಯ್ಯನ ಕೆರೆ ಇಂದು ಕಲುಷಿತ ನೀರು ಸೇರ್ಪಡೆಯಿಂದ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸದಾ ಪಕ್ಷಿಗಳ ಕಲರವ ಕೇಳಿಬರುತ್ತಿದ್ದ ಕೆರೆಯೀಗ ದುರ್ವಾಸನೆ ಬೀರುತ್ತಿದೆ. ಸರಿಯಾದ ಅಭಿವೃದ್ದಿ ಕಾಣದೆ ಪಕ್ಷಿಸಂಕುಲ, ಹಾಗೂ ಜೀವ ವೈವಿದ್ಯತೆಗಳಿಗೆ ಯಾವುದೇ ಆಸ್ಪದ ಇಲ್ಲದಂತಾಗಿದೆ.

ಸ್ವಚ್ಚ ನೀರಿನಿಂದ ಕಂಗೊಳಿಸುತ್ತಿದ್ದ ಕೆರೆ

ಒಂದು ಕಾಲದಲ್ಲಿ ಸುತ್ತಲೂ ನೀರು ತುಂಬಿ ಮಧ್ಯ ನಡುಗಡ್ಡೆ ಹೊಂದಿರುವ ಈ ಕೆರೆಯಲ್ಲಿ ಪ್ರವಾಸಿಗರು ಸದಾ ಜೇನುಹುಳುಗಳಂತೆ ತುಂಬಿರುತ್ತಿದ್ದರು. ಕೆರೆಯ ಸುತ್ತಲು ದಟ್ಟವಾಗಿ ಬೆಳೆದಿರುವ ನಾನಾಬಗೆಯ ಗಿಡ ,ಮರಗಳು ನೋಡಲು ಅರಣ್ಯದಂತೆ ಭಾವಾಗುತ್ತಿತ್ತು, ಪರಿಸರ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿ ಬೆಂಗಳೂರು ಸುತ್ತಮುತ್ತಲಿನ ಭಾಗಗಳ ಜನರಿಗೆ ನೆಚ್ಚಿನ ಪ್ರವಾಸಿ ತಾಣವಾಗಿತ್ತು. ಈಗ ಅದಕ್ಕೆಲ್ಲಾ ಪೂರ್ಣವಿರಾಮ ಬಿದ್ದಿದ್ದು ಇಲ್ಲಿ ಕೆರೆ ಇತ್ತು ಎಂಬುದೇ ಮರೆತು ಹೋಗಿದ್ದಾರೆ.

ಮಕ್ಕಳ ಆಟಿಕೆಗಳು ತುಕ್ಕು, ದೋಣಿಗಳಿಗೆ ಗೆದ್ದಲು

ಈ ಕೆರೆಯಲ್ಲಿ ವಿಶೇಷವೆಂದರೆ ವೆಂಗಯ್ಯನ ಕೆರೆಗೆ ಬರುವ ಪ್ರವಾಸಿಗಳಿಗೆ ಕೆರೆ ಅಂಗಳದಲ್ಲಿ ,ಮಕ್ಕಳ ಆಟಿಕೆ ,ದೋಣಿ ವಿಹಾರ ವ್ಯವಸ್ಥೆ , ಪಾದಚಾರಿ ಮಾರ್ಗ ವಾಯುವಿಹಾರಿಳನ್ನು ಕೈ ಬೀಸಿಕರೆಯುವಂತಿತ್ತು , ಆದರೆ ಈಗ ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿವೆ. ವಿಹಾರಕ್ಕಿದ್ದ ದೋಣಿಗಳು ಗೆದ್ದಲು ತಿನ್ನುತ್ತಿವೆ. ೬೬ ಎಕರೆ ವಿಸ್ತೀರ್ಣವುಳ್ಳ ವೆಂಗಯ್ಯನ ಕೆರೆಯ ತುಂಬಾ ಕೊಳಚೆ ನೀರು ತುಂಬಿಕೊಂಡು ಆಳೆತ್ತರದ ಜೋಂಡು, ನೀರು ಸೊಪ್ಪು ಆವರಿಸಿಕೊಂಡು ಕೆರೆ ಸೌಂದರ್ಯ ಕಣ್ಮರೆಯಾಗಿದೆ .

ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯಗಳು ನೇರ ಕೆರೆಗೆ

ಲಕ್ಷಾಂತರ ಜಲಚರಗಳ ಸಾವು

ನಗರ ಪ್ರದೇಶದ ಕಾರ್ಖಾನೆಗಳ ರಾಸಾಯನಿಕಯುಕ್ತ ನೀರು ಈ ಕೆರೆಗೆ ನೇರವಾಗಿ ಸೇರುವುದರಿಂದ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿ ವಿಪರೀತ ದುರ್ವಾಸನೆ ಬೀರುತ್ತಿದೆ. ನೀರು ಪೂರ್ಣ ಪ್ರಮಾಣದಲ್ಲಿ ಕಲುಷಿತ ಗೊಂಡು ಆಮ್ಲಜನಕದ ಕೊರತೆಯಿಂದ ಲಕ್ಷಾಂತರ ಜಲಚರಗಳು ಮೃತಪಟ್ಟಿವೆ.

ಇನ್ನೂ ಕೆರೆಯ ಪಶ್ಚಿಮ ಭಾಗದಲ್ಲಿ ರಾಮಮೂರ್ತಿನಗರ , ಲಕ್ಷ್ಮಣಮೂರ್ತಿ ನಗರ , ಕೌದೇನ ಹಳ್ಳಿ ಭಾಗದ ಚರಂಡಿ ಕೊಳಚೆ ನೀರು ಸೇರ್ಪಡೆಯಾದರೆ ಕೆಆರ್ ಪುರಂ ಬಡಾವಣೆಗಳ ಕೊಳಚೆ ನೀರು ದಕ್ಷಿಣ ಭಾಗದಲ್ಲಿ ಕೆರೆಗೆ ಸೇರುತ್ತದೆ ಇನ್ನು ಈ ಕೆರೆಯ ಪಶ್ಚಿಮ ಭಾಗದಲ್ಲಿ ೨೦ ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವಿದ್ದರೂ ಪ್ರಯೋಜನವಾಗುತ್ತಿಲ್ಲ ಪ್ರಸ್ತುತ ನಿರ್ವಹಣೆ ಹೊಣೆ ಹೊತ್ತಿರುವ ಅರಣ್ಯ ಇಲಾಖೆ ಕೆರೆ ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಿರುವುದು ದುರಂತವೇ ಸರಿ.

ಹತ್ತು ವರ್ಷಗಳ ಹಿಂದೆ ಅಭಿವೃದ್ದಿ ಖಾಸಗಿಯವರಿಂದ ಹಾಳು

ವೆಂಗಯ್ಯನ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಿ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲಾಗಿತ್ತು, ಸರ್ಕಾರದ ಅಭಿವೃದ್ದಿಯಿಂದ ಖಾಸಗಿಯವರು ಹಣ ಮಾಡಿಕೊಂಡರೇ ವಿನಃ ಕೆರೆಯನ್ನು ಮೊದಲಿನಂತೆ ಉಳಿಸಿಕೊಳ್ಳಲು ಪ್ರಯತ್ನ ಪಡಲಿಲ್ಲ, ನಂತರ ಖಾಸಗಿಯವರ ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೆರೆ ಸಂಪೂರ್ಣ ಅವನತಿಯತ್ತ ಸಾಗಿದೆ.

ವಾಯುವಿಹಾರಿಗಳು, ಪರಿಸರ ಪ್ರೇಮಿಗಳ ಸುಳಿವಿಲ್ಲ

ವಾಯುವಿಹಾರಿಗಳಿಗೆ ಮಾರ್ಗ ನಿರ್ಮಿಸಲಾಗಿತ್ತು ಕೆರೆಯ ದುಸ್ಥಿತಿಯಿಂದ ಇತ್ತು ಕಡೆ ಯಾರೂ ಸುಳಿಯುತ್ತಿಲ್ಲ, ಜನರ ಓಡಾಟವಿಲ್ಲದೇ ಪಾದಚಾರಿ ಮಾರ್ಗ ದಲ್ಲಿ ಪೊದೆಗಳು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಒಂದು ಕಾಲದಲ್ಲಿ ವಾಯುವಿಹಾರಿಗಳಿಗೆ ಹಾಗೂ ಪರಿಸರ ಪ್ರೇಮಿಗಳ ಮೆಚ್ಚಿನ ಪ್ರವಾಸಿತಾಣವಾಗಿದ್ದ ಕೆರೆ ಕಲುಷಿತಗೊಂಡಿವುದನ್ನು ಕಂಡು ಅಭಿವೃದ್ಧಿ ಮಾಡದೇ ಇರುವುದು ದುರದೃಷ್ಟಕರ . ನಗರಾಭಿವೃದ್ಧಿ ಸಚಿವರ ಸ್ವಕ್ಷೇತ್ರದಲ್ಲೇ
ಕೆರೆಗೆ ಈ ಸ್ಥಿತಿ ಎದುರಾಗಿದ್ದು, ಕೆರೆಯ ಅಭಿವೃದ್ಧಿಗೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸ್ಥಳೀಯರ ಅರೋಪವಾಗಿದೆ.

Leave a Reply

Your email address will not be published.

Back to top button