ಇನ್ವೆಸ್ಟಿಗೇಷನ್

ನೂರಾರು ಕೋಟಿ ಮೌಲ್ಯದ ಬಿಡಿಎ ಜಮೀನು ಗುಳುಂ!

  • ಮಡಿವಾಳದ ಸರ್ವೇ ನಂ.100ರಲ್ಲಿದ್ದ ಸರ್ಕಾರಿ ಭೂಮಿ
  • ಕೋರ್ಟ್ ತಡೆಯಾಜ್ಙೆ ಆದೇಶವಿದ್ದರೂ ತಲೆಎತ್ತಿದ ಕಟ್ಟಡಗಳು

RKV

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಲ್ಲಿ 500 ಕೋಟಿ ರೂ.ಗೂ ಅಧಿಕ ಮೌಲ್ಯದ ಅವ್ಯವಹಾರ ನಡೆದಿರುವುದು ಎಸಿಬಿ ದಾಳಿಯಲ್ಲಿ ಬಹಿರಂಗವಾದ ಬೆನ್ನಲ್ಲೇ ಮಡಿವಾಳದಲ್ಲಿರುವ ಬಿಡಿಎಗೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಜಮೀನನ್ನು ಪ್ರಭಾವಿಗಳು ನುಂಗಿ ನೀರು ಕುಡಿದಿರುವುದು ದಾಖಲೆ ಪತ್ರಗಳ ಸಮೇತ ಬಹಿರಂಗವಾಗಿದೆ. ಇಷ್ಟೇ ಅಲ್ಲದೇ ಸದರಿ ಜಮೀನಿನಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ನ್ಯಾಯಾಲಯ ಕೊಟ್ಟಿರುವ ತಡೆಯಾಜ್ಞೆ ಆದೇಶವನ್ನೂ ಲೆಕ್ಕಿಸದೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ನ್ಯಾಯಾಂಗ ವ್ಯವಸ್ಥೆಗೇ ಸೆಡ್ಡು ಹೊಡೆದಿರುವುದು ಬೆಳಕಿಗೆ ಬಂದಿದೆ.

1978ರಲ್ಲಿ ಬಿಡಿಎ, ಬಿಟಿಎಂ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಮಡಿವಾಳ ಗ್ರಾಮದ ಸರ್ವೇ ನಂ.100ರಲ್ಲಿದ್ದ ಜಮೀನನ್ನು ಭೂ ಸ್ವಾಧೀನಪಡಿಸಿಕೊಂಡಿತ್ತು. ಬಿಡಿಎ ದಾಖಲೆಗಳಲ್ಲಿ ಹಾಗೂ ಕಂದಾಯ ಇಲಾಖೆಯ ಆರ್‌ಟಿಸಿ ದಾಖಲೆಗಳ ಪ್ರಕಾರ ಬಿಡಿಎ ಸ್ವತ್ತು ಎಂದೇ ಇದೆ. ಆದರೆ, ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ಉದಾಸೀನ ಧೋರಣೆ ಹಾಗೂ ಹಣಕ್ಕೆ ತಮ್ಮನ್ನು ತಾವು ಮಾರಿಕೊಂಡಿರುವ ಪರಿಣಾಮವಾಗಿ ಅತ್ಯಮೂಲ್ಯವಾದ ಬಿಡಿಎ ಜಾಗ ಭೂಗಳ್ಳರ ಪಾಲಾಗಿದೆ. ಬಿಡಿಎ ಜಾಗ ಉಳಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಹೋರಾಟಕ್ಕೂ ವೇದಿಕೆ ಸಿದ್ಧವಾಗುತ್ತಿದೆ.

ಬಿಡಿಎಗೆ ಸೇರಿದ ಇದೇ ಆಸ್ತಿಯ ಮಾಲೀಕತ್ವದ ವಿಚಾರವಾಗಿ ಪ್ರಕರಣ 1978ರಿಂದಲೂ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಲೇ ಇದೆ. ಎಸಿ ಕೋರ್ಟ್, ಡಿಸಿ ಕೋರ್ಟ್, ಸಿಟಿ ಸಿವಿಲ್ ಕೋರ್ಟ್‌ಗಳ ನಂತರ ಹೈಕೋರ್ಟ್ ಅಂಗಳಕ್ಕೂ ಹೋಗಿದೆ. 2012ರ ಮಾರ್ಚ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಸದರಿ ಜಾಗದಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಸಬಾರದು ಎಂದು ಕೋರ್ಟ್ ಆದೇಶ ಹೊರಡಿಸಿದೆ. ಆದರೂ ಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದೆ ಅಕ್ರಮವಾಗಿ ಕಟ್ಟಡಗಳು ತಲೆಎತ್ತಿವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು ಹಾಗೂ ಬಿಡಿಎ ಅಧಿಕಾರಿಗಳು ಜಮೀನು ಕಬಳಿಸಿರುವ ಪ್ರಭಾವಿಗಳಿಗೆ ಹೆದರಿ ಜಾಣಕುರುಡರಾಗಿದ್ದಾರೆ.

ಕೋರ್ಟ್ ತಡೆಯಾಜ್ಞೆ ಕೊಟ್ಟಿರುವ ಆದೇಶ ಪ್ರತಿ

ಎಸ್ಸಿ-ಎಸ್ಟಿಗೆ ಸೇರಿದ ಜಾಗ
ವಿವಾದಿತ ಜಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೇರಿದ್ದು, ಬಡಾವಣೆ ನಿರ್ಮಾಣಕ್ಕಾಗಿ ಆ ಜಾಗವನ್ನು 1978ರಲ್ಲೇ ಬಿಡಿಎ ವಶಪಡಿಸಿಕೊಂಡು ಪರಿಹಾರ ಮೊತ್ತ ಸಹ ಆಗಲೇ ವಿತರಿಸಿದೆ. ಆದರೆ, ಭೂ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರಿಂದ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲೇ ಠೇವಣಿ ಇರಿಸಲಾಗಿತ್ತು. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಗೊಳ್ಳುವ ಮುನ್ನವೇ ಜಾಗದ ಮೇಲೆ ಕಣ್ಣು ಹಾಕಿದ ಭೂಗಳ್ಳರು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದಾರೆ.

ವಿವಾದಿತ ಸ್ಥಳದಲ್ಲಿ ಪ್ರತಿಷ್ಠಾಪನೆಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ತೆಗದು ಮೂಲೆಯಲ್ಲಿರಿಸಿರುವುದು

ಅಂಬೇಡ್ಕರ್ ಪ್ರತಿಮೆಗೆ ಅಪಮಾನ!
ಸದರಿ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಜಮೀನಿನ ಮಾಲೀಕ ಎಂದೇಳಿಕೊಳ್ಳುತ್ತಿರುವವರು ರಾತ್ರೋರಾತ್ರಿ ಪ್ರತಿಮೆಯನ್ನು ಕಿತ್ತು ಮೂಲೆಗೆ ಸೇರಿಸಿದ್ದಾರೆ. ಪ್ರತಿಮೆ ತೆರವುಗೊಳಿಸುವುದು ಯಾರಿಗೂ ಕಾಣಬಾರದು ಎಂಬ ಕಾರಣಕ್ಕೆ ಜಾಗಕ್ಕೆ ಕಬ್ಬಿಣದ ಶೀಟ್‌ಗಳನ್ನು ಅಳವಡಿಸಿ, ಯಾರೂ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ. ಸದರಿ ಜಾಗದ ಮಾಲೀಕತ್ವಕ್ಕಾಗಿ ಕಾನೂನು ಹೋರಾಟ ಮುಂದುವರಿಸಿರುವ ಸ್ಥಳೀಯ ನಿವಾಸಿ ರಮೇಶ್ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ. ಆಗ್ನೇಯ ವಿಭಾಗದ ಡಿಸಿಪಿಗೆ ದೂರು ಅರ್ಜಿ ಕೊಟ್ಟರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರಮೇಶ್.

ಬಿಬಿಎಂಪಿ ಎದುರು ಬೃಹತ್ ಪ್ರತಿಭಟನೆ
ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ, ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಸೇರಿ 32 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಜಾ ವಿಮೋಚನಾ ಸಮಿತಿ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಈ ಹಕ್ಕೊತ್ತಾಯಗಳಲ್ಲಿ ಸರ್ವೇ ನಂ.100ರಲ್ಲಿರುವ 4 ಎಕರೆ 22 ಗುಂಟೆ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ವಿಚಾರ ತಿಳಿದಿದ್ದರೂ ಸಹ ಬಿಡಿಎ ಅಧಿಕಾರಿಗಳು ಅಕ್ರಮವಾಗಿ ಪ್ರವೇಶಿಸಿರುವವರಿಗೆ ಖಾತೆ ಮಾಡಿಕೊಟ್ಟಿದೆ. ಆದ್ದರಿಂದ ಖಾತೆ ಕೊಟ್ಟಿರುವುದನ್ನು ಕೂಡಲೇ ರದ್ದುಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.

134 ಕೋಟಿ ಮೌಲ್ಯದ 13 ಸೈಟುಗಳ ಅಕ್ರಮ ಮಂಜೂರಾತಿ
ಇತ್ತೀಚೆಗೆ ಬಿಡಿಎ ಪ್ರಧಾನ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿತ್ತು. ಅದರಲ್ಲಿ 134 ಕೋಟಿ ರೂ. ಮೌಲ್ಯದ 13 ಸೈಟುಗಳ ಮಂಜೂರಾತಿಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಇದರಲ್ಲಿ ಮಡಿವಾಳ ಗ್ರಾಮದ ಸರ್ವೇ ನಂ 100ರ ಜಮೀನಿಗೆ ಸಂಬಂಧಿಸಿದ ಕಳ್ಳಾಟದ ದಾಖಲೆಗಳೂ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಅನರ್ಹ ವ್ಯಕ್ತಿಯೊಬ್ಬರಿಗೆ ಅರ್ಕಾವತಿ, ಕೆಂಪೇಗೌಡ, ವಿಶ್ವೇಶ್ವರಯ್ಯ ಲೇಔಟ್‌ಗಳಲ್ಲಿ ಅಂದಾಜು 75 ಕೋಟಿ ರೂ. ಮೌಲ್ಯದ 6 ನಿವೇಶನ ಹಂಚಿಕೆ ಮಾಡಲಾಗಿದೆ. ಅದಕ್ಕಾಗಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅದರ ಮೂಲ ದಾಖಲೆಗಳನ್ನು ಎಸಿಬಿ ಜಪ್ತಿ ಮಾಡಿ ಪರಿಶೀಲನೆ ಕಾರ್ಯ ಮುಂದುವರಿಸಿದೆ.

ಕಾದು ನೋಡಿ ಭಾಗ-2

  • ಬಿಡಿಎ ಆಸ್ತಿ ದೋಚಿದ ಆರೋಪ ಎದುರಿಸುತ್ತಿರುವ ಮಾಜಿ ಕಾರ್ಪೋರೇಟರ್ ಯಾರು?
  • ಮಾಜಿ ಪಾಲಿಕೆ ಸದಸ್ಯನ ಮೇಲೆ ಮಾಜಿ ಸಚಿವರೊಬ್ಬರ ಕೃಪಾಕಟಾಕ್ಷ ಹೇಗಿದೆ?
  • ಆಡಿಯೋದಲ್ಲಿ ರೆಕಾರ್ಡ್ ಆಗಿದೆ ಭೂ ಮಾಲೀಕನಿಗೆ ಎಕ್ಸ್ ಮಿನಿಸ್ಟರ್ ಕೊಟ್ಟ ಭರವಸೆ?
  • ಜಾಗ ನಮ್ಮದೇ ಎನ್ನುವ ಬಿಡಿಎ ಅಧಿಕಾರಿಗಳು ಆರ್‌ಟಿಐ ಅರ್ಜಿಗೆ ಕೊಟ್ಟಿರುವ ಉತ್ತರವೇನು?

ನಿರೀಕ್ಷಿಸಿ
ಇದೇ ವಿಚಾರ ಜನವಾಣಿ ಯೂಟ್ಯೂಬ್ ಚಾನಲ್‌ನಲ್ಲೂ ಇನ್ನಷ್ಟು ರೋಚಕವಾಗಿ ಬರುತ್ತೆ

Leave a Reply

Your email address will not be published.

Back to top button